ಬೆಂಗಳೂರು: ಕನ್ನಡ ನಾಡಿನ ಹಿರಿಯ ಸಂಶೋಧಕ, ಸಾಹಿತಿ ಡಾ. ಎಂ. ಚಿದಾನಂದ ಮೂರ್ತಿ ಇನ್ನು ನೆನಪು ಮಾತ್ರ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಚಿದಾನಂದ ಮೂರ್ತಿ ಇಂದು ಮುಂಜಾನೆ 3.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಹಂಪಿಯ ಸ್ಮಾರಕಗಳ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಚಿದಾನಂದ ಮೂರ್ತಿ, ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದರು. ಸದಾ ಕ್ರಿಯಾಶೀಲರಾಗಿದ್ದ ಚಿದಾನಂದ ಮೂರ್ತಿ, ವರ್ತಮಾನದ ಬೆಳವಣಿಗೆಗೆ ಕೂಡ ಪ್ರತಿಕ್ರಿಯಿಸುತ್ತಿದ್ದರು. 1931 ಮೇ 10 ರಂದು ಹುಟ್ಟಿದ ಚಿದಾನಂದ ಮೂರ್ತಿ , ಮೈಸೂರು ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದಿದ್ದರು.