newsics.com
ಮಂಗಳೂರು: ಹಿರಿಯ ಯಕ್ಷಗಾನ ಪ್ರಸಂಗಕರ್ತ, ಕಟೀಲು ಮೇಳದ ಹಿರಿಯ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ(68) ಶನಿವಾರ ನಿಧನರಾದರು.
ಕಳೆದ ಕೆಲ ಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ ಶೋಭಾ ಪೂಂಜಾ ಹಾಗೂ ಇಬ್ಬರು ಪುತ್ರರಿದ್ದರು.
35ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಪೂಂಜ, ‘ಅಭಿನವ ವಾಲ್ಮೀಕಿ’ ಎಂಬ ಬಿರುದಿಗೆ ಪಾತ್ರರಾಗಿದ್ದರು.
ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ತೆಂಕುತಿಟ್ಟು ಯಕ್ಷಗಾನದ ಭಾಗವತರಷ್ಟೇ ಅಲ್ಲದೆ, ವೇಷಧಾರಿ, ಚಂಡೆ-ಮದ್ದಳೆವಾದಕ, ಸಮರ್ಥ ರಂಗ ನಿರ್ದೇಶಕರಾಗಿದ್ದರು. ಉತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ಪೂಂಜ ಅವರು ಬಿ. ಎಸ್ಸಿ ಪದವೀಧರರಾಗಿದ್ದರು.
ನಳಿನಾಕ್ಷ ನಂದಿನಿ, ಮಾನಿಷಾದ, ಮಾತಂಗ ಕನ್ಯೆ, ಸತಿ ಉಲೂಪಿ, ವಧೂ ವೈಶಾಲಿನಿ,ಮೇಘ ಮಯೂರಿ, ಸ್ವರ್ಣ ನೂಪುರ, ಅಮೃತ ವರ್ಷಿಣಿ, ಮೇಘ ಮಾಣಿಕ್ಯ ಸೇರಿ 35 ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. ಕೆಲವು ನೃತ್ಯ ರೂಪಕಗಳು, ನಾಟಕಗಳನ್ನೂ ರಚಿಸಿದ್ದರು.