ಬೆಂಗಳೂರು: ನಂಬಿಕೆಯೇ ಹಾಗೆ. ಆಚರಿಸುವವರಿಗೆ ನಂಬಿಕೆ. ನಂಬಿಕೆಯಿಲ್ಲದವರಿಗೆ ಅದು ಮೂಢನಂಬಿಕೆ. ‘ನಂಬಿ ಕೆಟ್ಟವರಿಲ್ಲವೋ’ ಎಂಬ ದಾಸವಾಣಿ ನಂಬಿಯೋ ಏನೋ ಗೊತ್ತಿಲ್ಲ. ಕಂಕಣ ಸೂರ್ಯಗ್ರಹಣ ಕಾಲದಲ್ಲಿ ವೈವಿಧ್ಯಮಯ ಆಚರಣೆಗಳನ್ನು ನಡೆಸಿದರು.
ಇಂದು ನಡೆದ ಕಂಕಣ ಸೂರ್ಯಗ್ರಹಣ ಸಂದರ್ಭದಲ್ಲೂ ಇಂತಹ ಹಲವು ಆಚರಣೆಗಳು ರಾಜ್ಯದ ವಿವಿಧೆಡೆ ನಡೆದವು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಸೇರಿ ರಾಜ್ಯದ ಹಲವೆಡೆ ಗ್ರಹಣ ಕಾಲದಲ್ಲಿ ಮನೆಯಿಂದ ಹೊರಬರಲು ಹಿಂಜರಿದರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಮನೆಯಿಂದ ಹೊರಬರಲೇ ಇಲ್ಲ. ವಾಕಿಂಗ್ ಕೂಡ ರದ್ದುಗೊಳಿಸಿ ಮನೆಯಲ್ಲೇ ಉಳಿದರು.
ಕಲಬುರಗಿಯ ಸುಲ್ತಾನಪುರದಲ್ಲಿ ಅಂಗವಿಕಲ ಮಕ್ಕಳನ್ನು ಕುತ್ತಿಗೆವರೆಗೆ ಹೂಳಿ ಅಂಗವೈಕಲ್ಯ ಸರಿಯಾಗಲಿ ಎಂದು ಪ್ರಾರ್ಥಿಸಿದರು.
ಬೆಳಗಾವಿ, ಬಳ್ಳಾರಿ, ವಿಜಯಪುರ, ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ಒನಕೆ ನಿಲ್ಲಿಸಿ ಒಳ್ಳೆಯದಾಗಲಿ ಎಂದರು. ಬಳ್ಳಾರಿಯ ಸಿರಗುಪ್ಪ ತಾಲೂಕಿನ ಎರಕಲ್ಲು ಗುಡ್ಡ ಗ್ರಾಮಸ್ಥರು ಗ್ರಹಣ ವೇಳೆ ನೀರಿನ ಮಧ್ಯೆ ಒನಕೆ ನಿಲ್ಲಿಸಿದರು.
ಆಂಧ್ರ ಮೂಲದ ಜ್ಯೋತಿಷಿಯೊಬ್ಬರ ಸೂಚನೆ ಮೇರೆಗೆ ಬಳ್ಳಾರಿಯ ನಾನಾ ಕಡೆಗಳಲ್ಲಿ ಎಕ್ಕದ ಗಿಡಗಳಿಗೆ ಬುಧವಾರ ರಾತ್ರಿ ಅರಿಶಿಣಕೊಂಬು ಕಟ್ಟಿ ವಿಶೇಷಪೂಜೆ ಹಾಗೂ ಪ್ರದಕ್ಷಿಣೆ ಮಾಡಿದರು.
ಹೀಗೆ ಗ್ರಹಣ ಕಾಲದಲ್ಲಿ ಅವರವರ ಭಾವಕ್ಕೆ, ಭಕುತಿಗೆ, ನಂಬಿಕೆಗೆ ಅನುಸಾರವಾಗಿ ವಿವಿಧ ಬಗೆಯ ಆಚರಣೆ ಕೈಗೊಂಡರು.