newsics.com
ಕೊಲ್ಲಂ: ಬೆನ್ನ ಹಿಂದೆ ಪಿಎಫ್‌ಐ ಎಂದು ಬರೆದು ದಿಢೀರ್ ಖ್ಯಾತಿ ಪಡೆಯುವ ಉಮೇದಿನಲ್ಲಿ ಯೋಧನೇ ಕಟ್ಟುಕಥೆ ಹೆಣೆದಿರುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ದಕ್ಷಿಣ ಕೇರಳ ಜಿಲ್ಲೆಯ ಕಡಕ್ಕಲ್‌ನಲ್ಲಿ ಯೋಧನ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಯೋಧ ಶೈನ್ ಕುಮಾರ್ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಡೆದಿದ್ದೇನು?; ರಾತ್ರಿ ಮನೆಗೆ ಬೈಕ್‌ನಲ್ಲಿ ಮರಳುತ್ತಿದ್ದ ವೇಳೆ ರಬ್ಬರ್ ಪ್ಲಾಂಟೇಷನ್ ಬಳಿ ಆರು ಮಂದಿ ಅಪರಿಚಿತರ ಗುಂಪೊಂದು ನನ್ನನ್ನು ಥಳಿಸಿತು. ಬಳಿಕ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ‘ಪಿಎಫ್‌ಐ’ ಎಂದು ಬರೆಯಿತು ಎಂದು ಯೋಧ, ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆಯಿಂದ ತಿಳಿದು ಬಂದಿದ್ದೇನು?: ‘ಯೋಧನಿಗೆ ತಾನು ದಿಢೀರ್ ಪ್ರಸಿದ್ಧನಾಗಬೇಕು ಎಂಬ ಹಂಬಲ ಇತ್ತು. ಅದಕ್ಕೆ ಅನುಗುಣವಾಗಿ ಈ ಸುಳ್ಳಿನ ಕಥೆ ಸೃಷ್ಟಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬಣ್ಣ, ಕುಂಚ ಹಾಗೂ ಯೋಧನ ಕೈಗಳನ್ನು ಕಟ್ಟಲು ಬಳಸಿದ್ದ ಟೇಪ್ ಅನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಶೈನ್ ಕುಮಾರ್ ಅವರೇ ಈ ಘಟನೆಯ ಹಿಂದಿನ ಸೂತ್ರಧಾರ. ತನ್ನ ಬೆನ್ನಿನ ಮೇಲೆ ಪಿಎಫ್‌ಐ ಎಂದು ಬರೆಯುವಂತೆ ಆತ ಹೇಳಿದರು. ಕುಡಿದ ಮತ್ತಿನಲ್ಲಿದ್ದ ನಾನು ‘ಡಿಎಫ್‌ಐ’ ಎಂದು ಬರೆದೆ. ಆದರೆ, ಅದನ್ನು ‘ಪಿಎಫ್‌ಐ’ ಎಂದು ತಿದ್ದುವಂತೆ ತಿಳಿಸಿದರು. ಕೊನೆಗೆ, ಆತ ಹೇಳಿದಂತೆಯೇ ಮಾಡಿದೆ. ನಂತರ ತನ್ನನ್ನು ಚೆನ್ನಾಗಿ ಥಳಿಸುವಂತೆ ಕೋರಿಕೊಂಡರು. ನಾನು ಮದ್ಯ ಸೇವಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ’ ಎಂದು ಮಾಧ್ಯಮದವರ ಮುಂದೆ ಯೋಧನ ಸ್ನೇಹಿತ ಹೇಳಿದ್ದಾರೆ.