ಧಾರವಾಡ: ನಕಲಿ ಬಿತ್ತನೆ ಬೀಜ,ದುಬಾರಿ ಬಿತ್ತನೆ ಬೀಜ ಇವೆಲ್ಲವೂ ಮುಂಗಾರಿನ ಜತೆಗೆ ರೈತರನ್ನು ಕಾಡುವ ಸಮಸ್ಯೆಗಳು. ಹೀಗಾಗಿ ಇದಕ್ಕೆ ಪರಿಹಾರವನ್ನು ರೈತರೇ ಕಂಡುಕೊಂಡಿದ್ದು, ಅನ್ನದಾತರೇ ತಮಗೆ ಅಗತ್ಯವಾದ ಬಿತ್ತನೆ ಬೀಜ ಉತ್ಪಾದನಾ ಕಂಪನಿ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಉತ್ತರ ಕರ್ನಾಟಕದ ಧಾರವಾಡದಲ್ಲಿ ಸಮಾನಮನಸ್ಕ ರೈತರು ಒಂದೆಡೆ ಸೇರಿ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಕಲ್ಮೇಶ್ವರ್ ರೈತ ಉತ್ಪಾದನಾ ಕಂಪನಿ ಎಂಬ ಹೆಸರಿನಲ್ಲಿ ಈ ಬೀಜ ಉತ್ಪಾದನಾ ವ್ಯವಸ್ಥೆ ಆರಂಭವಾಗಲಿದೆ.
ಮುಂದಿನ ವರ್ಷದ ಬಿತ್ತನೆ ವೇಳೆಗೆ ಈ ರೈತರ ಬ್ಯಾಂಕ್ ರೈತರಿಗೆ ಲಭ್ಯವಾಗಲಿದ್ದು, ಇದಕ್ಕೆ ಕರ್ನಾಟಕದ ಮೊದಲ ಬೀಜ ಉತ್ಪಾದನಾ ಕಂಪನಿ ಎಂಬ ಗೌರವವೂ ದಕ್ಕಲಿದೆ.
ಕೃಷಿಕರು ಬೇಕಾಗಿದ್ದಾರೆ… ಹೀಗೊಂದು ಅಪರೂಪದ ಜಾಹೀರಾತು!
ರೈತರ ಈ ಪ್ರಯತ್ನಕ್ಕೆ ಧಾರವಾಡ ಕೃಷಿ ವಿವಿ,ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ, ನಬಾರ್ಡ್ ಬ್ಯಾಂಕ್, ದೇಶಪಾಂಡೆ ಫೌಂಡೇಶನ್ ಮಾರ್ಗದರ್ಶನ ಹಾಗೂ ಅಗತ್ಯ ಸಹಾಯ ನೀಡಿದೆ.
ಕಂಪನಿಯಲ್ಲಿ ಸಮಾನಮನಸ್ಕ 20 ರೈತರು ಶೇರುದಾರರಾಗಿದ್ದು ಮೊದಲ ಹಂತದಲ್ಲಿ 50 ಎಕರೆಯಲ್ಲಿ ಹೆಸರುಕಾಳು ಬೆಳೆಯಲು ಮುಂದಾಗಿದ್ದು ಇದರಿಂದ 200 ಕ್ವಿಂಟಾಲ್ ಬೀಜ ಉತ್ಪಾದನೆ ಆಗಲಿದೆ.
ಇಂತಹ ಪ್ರಯತ್ನದಿಂದ ರೈತರು ಯಾವ ಕಂಪನಿಯ ಬೀಜ ಖರೀದಿಸಬೇಕೆಂಬುದೇ ಗೊಂದಲವಾಗುತ್ತಿತ್ತು. ಈ ಪ್ರಯತ್ನದಿಂದ ರೈತರಿಗೆ ನೆರವಾಗಲಿದ್ದು ಮುಂದಿನ ದಿನಗಳಲ್ಲಿ ರಸಗೊಬ್ಬರ ಮಾರಾಟ, ಬೆಳೆದ ಬೆಳೆ ಖರೀದಿ ಸೇರಿದಂತೆ ರೈತರನ್ನು ನೇರ ಮಾರುಕಟ್ಟೆಗೆ ಪರಿಚಯಿಸುವ ಎಲ್ಲ ಪ್ರಯತ್ನಕ್ಕೆ ಇದು ನೆರವಾಗಲಿದೆ ಎನ್ನುತ್ತಾರೆ ಬೀಜ ಬ್ಯಾಂಕ್’ನ ರೈತರು.