ಮಂಡ್ಯ: ಕಾಡಾನೆಗಳನ್ನು ಓಡಿಸಲು ಅರಣ್ಯಾಧಿಕಾರಿಗಳು ಬೆದರು ಗುಂಡು ಹಾರಿಸಿದ್ದು, ವನ್ಯಜೀವಿ ವಿಭಾಗದ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ.
ಮಂಡ್ಯ ತಾಲ್ಲೂಕಿನ ಕಿರುಗಾವಲು ಹೋಬಳಿಯ ಕೊದೇನಕೊಪ್ಪಲು ಗ್ರಾಮದ ಬಳಿ ಈ ಘಟನೆ ನಡೆದಿದೆ.
ವನ್ಯಜೀವಿ ವಿಭಾಗದ ಸಿಬ್ಬಂದಿ ಶಿವನಂಜಯ್ಯ (45) ಮೃತರಾಗಿದ್ದು, ಗುರುವಾರ ಬೆಳಗ್ಗೆ ಕಿರುಗಾವಲು ಹೋಬಳಿಯ ಕೆಲ ಗ್ರಾಮಗಳಿಗೆ ಕಾಡಾನೆಗಳು ದಾಳಿ ಇಟ್ಟು ನಷ್ಟ ಉಂಟು ಮಾಡಿದ್ದವು. ಇವುಗಳನ್ನು ಓಡಿಸಲು ಅರಣ್ಯಾಧಿಕಾರಿಗಳು ಯತ್ನಿಸಿದ್ದರು. ಸಂಜೆಯಾಗುತ್ತಿದ್ದಂತೆ ಪುನಃ ಆನೆಗಳು ಕೊದೇನಕೊಪ್ಪಲು ಗ್ರಾಮದ ಬಳಿ ಕಾಣಿಸಿಕೊಂಡಿವೆ.
ಆಗ ಅರಣ್ಯಾಧಿಕಾರಿಗಳು ಅವುಗಳನ್ನು ಓಡಿಸಲು ಫೈರಿಂಗ್ ಮಾಡಿದ್ದಾರೆ. ಆದರೆ ಕತ್ತಲಾದ್ದರಿಂದ ಗೊತ್ತಾಗದೆ ಅಲ್ಲಿಯೇ ಇದ್ದ ವೈಲ್ಡ್ಲೈಫ್ ನ ಸಿಬ್ಬಂದಿ ಶಿವನಂಜಯ್ಯಗೆ ಗುಂಡು ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾಡಾನೆ ಓಡಿಸಲು ಹಾರಿಸಿದ ಗುಂಡಿಗೆ ಸಿಬ್ಬಂದಿ ಬಲಿ
Follow Us