ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಬೆಳಗ್ಗೆ ಮಸೀದಿಯಲ್ಲಿ ತಲಾಕ್ ನೀಡಿದವ ಸಂಜೆ ಮನೆಗೆ ಬಂದು ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೆ.ಪಿ.ನಗರದ ಎನ್ ಕ್ಲೇವ್ ಅಪಾರ್ಟ್’ಮೆಂಟ್ ಬಳಿ ನಿನ್ನೆ (ಆ.5) ಸಂಜೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಗೀಡಾದ ಮಹಿಳೆಯನ್ನು ನಜ್ನೀನ್ ತಾಜ್ (43) ಎಂದು ಗುರುತಿಸಲಾಗಿದೆ. ನಜ್ನೀನ್ ತಾಜ್ ಹಾಗೂ ಪತಿ ಕಲೀಂ ಶರೀಪ್ ನಡುವೆ ಮನೆಯಲ್ಲಿ ಸದಾ ಗಲಾಟೆ ನಡೆಯುತ್ತಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರಿಗೂ ಮದುವೆಯಾಗಿದೆ. ಈ ನಡುವೆ ಶರೀಫ್ ತನ್ನ ಪತ್ನಿಯನ್ನು ಅನುಮಾನಿಸುತ್ತಿದ್ದ. ಜತೆಗೆ ಹಣಕಾಸಿನ ವಿಚಾರವಾಗಿಯೂ ಮನೆಯಲ್ಲಿ ಪರಸ್ಪರ ಗಲಾಟೆಯಾಗಿದೆ. ಹೀಗಾಗಿ ನಿನ್ನೆ ಬೆಳಗ್ಗೆ ಗಂಡ ಹೆಂಡತಿ ಇಬ್ಬರೂ ಬನ್ನೇರುಘಟ್ಟ ರಸ್ತೆಯಲ್ಲಿನ ಮಸೀದಿಗೆ ತೆರಳಿ ತಲಾಕ್ ತೆಗೆದುಕೊಂಡಿದ್ದರು. ಆದರೆ, ಮನೆಗೆ ಬಂದು ಮತ್ತೆ ಜಗಳ ತೆಗೆದಿದ್ದ ಗಂಡ ಕಲೀಂ ಪತ್ನಿಯನ್ನು ಹಿಗ್ಗಾಮುಗ್ಗಾ ಹೊಡೆದಿದ್ದ, ಅಲ್ಲದೆ ಜಗಳ ಜಾಸ್ತಿಯಾಗಿ ಆಕೆಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ. ಪತ್ನಿಯ ಮೃತ ದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗಾಬರಿಯಿಂದ ಆತ ಮನೆಯಿಂದ ಹೊರಹೋಗಿದ್ದ. ಈ ನಡುವೆ ಮನೆಗೆ ಮಗ ಬಂದು ನೋಡಿದ್ದು ಆಗ ಪ್ರಕರಣ ಬಹಿರಂಗವಾಗಿದೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಧಾರವಾಡದಲ್ಲಿ ಭಾರೀ ಮಳೆ; ಅಪ್ಪನೆದುರೇ ಕೊಚ್ಚಿಹೋದ ಬಾಲಕಿ
ಪೊಲೀಸರ ವಿಚಾರಣೆ ವೇಳೆ ಪತ್ನಿಯ ನಡವಳಿಕೆ ಸರಿಯಿರಲಿಲ್ಲ. ನನ್ನನ್ನ ತೊರೆದು ಬೇರೆಯವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಕಲೀಂ ಆರೋಪಿಸಿದ್ದಾನೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪಿಪಿಇ ಕಿಟ್ ಧರಿಸಿ ಮಹಜರು ಮಾಡಿದ್ದು, ಕೋವಿಡ್ ಪರೀಕ್ಷೆ ವರದಿ ಬಂದ ನಂತರ ಮೃತ ದೇಹವನ್ನು ಸಂಬಂಧಿಕರಿಗೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.