ಬೆಂಗಳೂರು: ಮಂಗಳವಾರ ರಾತ್ರಿಯಿಂದ ಜಾರಿಯಾಗಿರುವ ಲಾಕ್ಡೌನ್ ವೇಳೆಯಲ್ಲಿ ಬೆಳಗ್ಗೆ 5ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ದಿನಸಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.
ಈ ವೇಳೆಯಲ್ಲೇ ಸಾರ್ವಜನಿಕರು ದಿನಸಿ, ತರಕಾರಿ ಖರೀದಿಸಬಹುದು. ಮಧ್ಯಾಹ್ನ 12ರ ನಂತರ ಎಲ್ಲಾ ದಿನಸಿ ಅಂಗಡಿಗಳನ್ನು ಮುಚ್ಚುವ ಮೂಲಕ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಭಾಸ್ಕರ್ ರಾವ್ ಹೇಳಿದ್ದಾರೆ.
ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಭಾಸ್ಕರ್ ರಾವ್ ಅವರು ಸಾರ್ವಜನಿಕರಿಗೆ ಕೆಲ ಮಾರ್ಗದರ್ಶಿ ಸೂಚನೆಗಳನ್ನು ನೀಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ನಿಯಮ ಉಲ್ಲಂಘಿಸಿದರೆ ದಂಡ ಹಾಕಲಾಗುವುದು. ಜುಲೈ 22 ಬೆಳಗ್ಗೆ 5 ಗಂಟೆಗೆ ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಇದು ಅಲ್ಪ ಅವಧಿಯ ಲಾಕ್ ಡೌನ್ ಆಗಿರುವುದರಿಂದ ಯಾರೊಬ್ಬರಿಗೂ ಇಲಾಖೆಯಿಂದ ಯಾವುದೇ ತರಹದ ಪಾಸ್ ವಿತರಣೆ ಮಾಡುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಮೆಡಿಕಲ್ ಅಂಗಡಿಗಳ ಸೇವೆ ಲಭ್ಯವಿದೆ. ಫುಡ್ಲಿ ಡೆಲಿವರಿ ವಾಹನಗಳಿಗೆ ಮಾತ್ರ 8 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದ್ದು, ಹೋಟೆಲ್ ಗಳು ಕೂಡ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ. ಆದರೆ, ಸಿಬ್ಬಂದಿ ಕಡ್ಡಾಯವಾಗಿ ಸಮವಸ್ತ್ರದಲ್ಲಿರಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗ ನಗರದಲ್ಲಿ 2 ಸಾವಿರಕ್ಕಿಂತ ಅಧಿಕ ಕಂಟೈನ್ಮೆಂಟ್ ಜೋನ್ ಗಳಿದ್ದು, ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಇರಲಿದೆ ಎಂದರು.