ಮೈಸೂರು: ಬೆಂಗಳೂರಿನಲ್ಲಿ ನಾಲ್ಕೂವರೆ ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿರುವ ಬೆನ್ನಲ್ಲೇ, ಮೈಸೂರಿನಲ್ಲಿ ಮೂವರು ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ.
ಈ ವಿಚಾರ ಮೈಸೂರಿಗರ ಆತಂಕ ಹೆಚ್ಚಿಸಿದೆ. ನಾಲ್ಕೈದು ದಿನಗಳಿಂದಲೂ ಅವರಿಗಾಗಿ ಹುಡುಕಾಟ ನಡೆಯುತ್ತಿದೆಯಾದರೂ ಅವರ ಸುಳಿವು ಸಿಕ್ಕಿಲ್ಲ. ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ ವಿಳಾಸ ನೀಡಿದ್ದು, ಇದು ಸುಳ್ಳು ವಿಳಾಸವಾಗಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಬಿ.ವಿ. ಮಂಜುನಾಥ್ ಹೇಳಿದ್ದಾರೆ.
ಈ ಮಧ್ಯೆ, ಮೈಸೂರಿನ ಗೋಕುಲಂ ನಿವಾಸಕ್ಕೆ ಗುರುವಾರ ರಾತ್ರಿ ಆಸ್ಪತ್ರೆಯಿಂದ ವಾಪಸ್ಸಾದ ಕೊರೊನಾವೈರಸ್ ಸೋಂಕಿತ ವ್ಯಕ್ತಿಯು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ವ್ಯಕ್ತಿಯ ನಿವಾಸಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೋನಾ ಪರೀಕ್ಷೆಗೆ ಆಧಾರ್, ವೋಟರ್ ಐಡಿ ಕಡ್ಡಾಯ
ಈ ಸೋಂಕಿತರು ಕೊಟ್ಟಿರುವ ನಂಬರ್ ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇತ್ತ ಮನೆ ವಿಳಾಸ ಕೂಡ ತಪ್ಪಾಗಿ ನೀಡಿರುವುದರಿಂದ ಇವರನ್ನು ಪತ್ತೆ ಹಚ್ಚುವುದೇ ಕಷ್ಟವಾಗಿದೆ.
ಈ ಮಧ್ಯೆ, ಮೈಸೂರಿನ ಮಂಡಿ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವುದರಿಂದ ಈ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸಿಬ್ಬಂದಿ ಸಂಪರ್ಕದಲ್ಲಿದ್ದ ನೂರಾರು ಮಂದಿಗೆ ಆತಂಕ ಶುರುವಾಗಿದೆ. ಠಾಣೆಯ ಇತರೆ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.