ಬೆಂಗಳೂರು: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡದ್ದಕ್ಕೆ ಕಾರಣ ಕೇಳಿ ಜಾರಿ ಮಾಡಲಾದ ನೊಟೀಸ್’ಗೆ ನಿಗದಿತ ಅವಧಿಯಲ್ಲಿ ಉತ್ತರಿಸದೇ ಉದ್ಧಟತನ ತೋರಿದ ನಗರದ ಎರಡು ಆಸ್ಪತ್ರೆಗಳ ಒಪಿಡಿ ಸ್ಥಗಿತಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಗರದ ವಿಕ್ರಂ ಹಾಸ್ಪಿಟಲ್ ಹಾಗೂ ಅಪೋಲೋ ಆಸ್ಪತ್ರೆಯ ಜಯನಗರ ಶಾಖೆಯ ಒಪಿಡಿ ವಿಭಾಗವನ್ನು 48 ಗಂಟೆ ಕಾಲ ಸ್ಥಗಿತಗೊಳಿಸಲು ಆದೇಶಿಸಲಾಗಿದ್ದು, ಆದೇಶ ಉಲ್ಲಂಘಿಸಿದಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಹಾಗೂ ಕೆಪಿಎಂಇ ನಿಯಮದಡಿ ತಮ್ಮ ಸಂಸ್ಥೆಗಳ ಪರವಾನಿಗೆ ರದ್ದುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ನಗರದ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ಆಸ್ಪತ್ರೆಯ ಶೇಕಡಾ 50ರಷ್ಟು ಬೆಡ್’ಗಳನ್ನು ಸೋಂಕಿತರಿಗಾಗಿ ಮೀಸಲಿಡಬೇಕೆಂದು ಸರ್ಕಾರ ಆದೇಶಿಸಿತ್ತು. ಆದರೆ ವಿಕ್ರಂ ಹಾಸ್ಪಿಟಲ್ ಹಾಗೂ ಜಯನಗರ ಅಪೋಲೋ ಆಸ್ಪತ್ರೆಗಳು ನಿಯಮ ಉಲ್ಲಂಘಿಸಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವೈಧ್ಯಾಧಿಕಾರಿ ಡಾ.ಶ್ರೀನಿವಾಸ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿತ್ತು. ಅಲ್ಲದೇ ಒಂದು ದಿನದಲ್ಲಿ ನೊಟೀಸ್’ಗೆ ಉತ್ತರಿಸುವಂತೆ ಆದೇಶಿಸಿತ್ತು. ಆದರೆ ಆಸ್ಪತ್ರೆಗಳು ಉತ್ತರಿಸುವ ಸೌಜನ್ಯ ತೋರದ ಹಿನ್ನೆಲೆಯಲ್ಲಿ ಇಂತಹ ಕ್ರಮಕ್ಕೆ ಮುಂದಾಗಿದೆ.