ಬೆಂಗಳೂರು: ಡ್ರೈನೇಜ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದುರಂತ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.
ತಿರುಮಗೊಂಡನಹಳ್ಳಿ ಬಳಿಯ ಪಲೋಮಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಈ ದುರ್ಘಟನೆ ನಡೆದಿದ್ದು, ಜೇಮ್ಸ್(26) ಮತ್ತು ಆನಂದ(32) ಮೃತಪಟ್ಟವರು. ಈ ಪೈಕಿ ಜೇಮ್ಸ್ ತಮಿಳುನಾಡಿನ ಹೊಸೂರು ಮೂಲದವನಾಗಿದ್ದು, ಈತ ಸೆಪ್ಟಿಕ್ ಟ್ಯಾಂಕ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಅಂತೆಯೇ ಆನಂದ್ ಆನೇಕಲ್ ತಾಲೂಕಿನ ಮಂಚನಹಳ್ಳಿ ನಿವಾಸಿಯಾಗಿದ್ದು, ಪಲೋಮಾ ಕಂಪನಿಯ ಉದ್ಯೋಗಿ ಎಂದು ಮೂಲಗಳು ತಿಳಿಸಿವೆ.
ಪಲೋಮಾ ಕಂಪನಿಯ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಸೋಮವಾರ ಜೆಟ್ಟಿಂಗ್ ಮಿಷನ್ ತರಿಸಲಾಗಿತ್ತು. ಡ್ರೈನೇಜ್ ಸ್ವಚ್ಛಗೊಳಿಸಲು ಮುಂದಾದಾಗ ಮೂರು ಜನರು ಸೆಪ್ಟಿಕ್ ಟ್ಯಾಂಕಿನಲ್ಲಿ ಬಿದ್ದಿದ್ದಾರೆ. ಕಂಪನಿ ಎಚ್.ಆರ್. ಚಂದ್ರಶೇಖರ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ.