newsics.com
ಉಡುಪಿ: ಸೆ.28ರಿಂದ ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನಾವಕಾಶ ದೊರೆಯಲಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾ.22ರಿಂದ ಶ್ರೀಮಠಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು.
ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸೆ. 28ರಿಂದ ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಿದ್ದಾರೆ ಎಂದು ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.
ಮಠದ ಸೇವಾ ಕೌಂಟರ್‌ನಲ್ಲಿ ಭಕ್ತರಿಗೆ ಅಗತ್ಯ ಮಾಹಿತಿ, ನಿರ್ಬಂಧಗಳ ಬಗ್ಗೆ ತಿಳಿಸಲಾಗುವುದು. ಮೊದಲ ಹಂತದಲ್ಲಿ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಪ್ರವೇಶವಿರುತ್ತದೆ. ಎಲ್ಲ ಭಕ್ತರು ರಾಜಾಂಗಣದ ಬಳಿ ಇರುವ ಉತ್ತರ ದ್ವಾರದ ಮೂಲಕ ಪ್ರವೇಶಿಸಬೇಕು. ಮಠದ ಆವರಣದೊಳಗೆ ಯಾರೂ ಮಂತ್ರ, ಪಾರಾಯಣ ಮಾಡಬಾರದು. ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್ ಬಳಸಿಕೊಳ್ಳಬೇಕು. ಹಿರಿಯ ನಾಗರಿಕರು, ಚಿಕ್ಕಮಕ್ಕಳು ಮನೆಯಲ್ಲಿದ್ದು ಪ್ರಾರ್ಥನೆ ಮಾಡುವುದು ಉತ್ತಮ. ಮುಂದಿನ ದಿನಗಳಲ್ಲಿ ಭೋಜನ ಪ್ರಸಾದ- ತೀರ್ಥ ಪ್ರಸಾದ ಆರಂಭಿಸಲಾಗುವುದು. ತುಪ್ಪ, ಎಳ್ಳೆಣ್ಣೆ ದೀಪಗಳನ್ನು ಬೆಳಗುವ ಬದಲು ಕೌಂಟರ್‌ನಲ್ಲಿ ಸಿಗುವ ಶುದ್ಧ ಎಳ್ಳನ್ನು ಪಡೆದು ಒಪ್ಪಿಸಬೇಕು. ಇದರಿಂದ ತಯಾರಿಸಿದ ಶುದ್ಧ ಎಳ್ಳೆಣ್ಣೆಯನ್ನು ಬಳಸಲಾಗುವುದು ಎಂದು ಗೋವಿಂದರಾಜ್ ಶನಿವಾರ ಮಾಹಿತಿ ನೀಡಿದರು.
ಸೆ.28ರಿಂದ ಉಡುಪಿ ಶ್ರೀಕೃಷ್ಣ ಮಠ ಭಕ್ತರಿಗೆ ಓಪನ್
Follow Us