ಮೈಸೂರು: ಈಕೆ ಕೆ.ಟಿ. ಮೇಘನಾ. ಮೈಸೂರು ಮೂಲದವರು. ಇವರ ಛಲ, ಹಠಕ್ಕೆ ದೇಶವೇ ನಿಬ್ಬೆರಗಾಗಿದೆ. ಎಲ್ಲ ಅಂಗಗಳೂ ಸರಿ ಇರುವ ಹಲವರು ಏನಾದರೂ ಒಂದು ನೆಪ ಹೇಳಿ ಸಾಧನೆಯಿಂದಲೋ, ಪರೀಕ್ಷೆಯಿಂದಲೋ ಅಥವಾ ಹಿಡಿದ ಕೆಲಸದಿಂದಲೋ ಅರ್ಧದಲ್ಲಿಯೇ ಬಿಟ್ಟು ವಿಮುಖರಾಗಿಬಿಡುತ್ತಾರೆ. ಆದರೆ ಕೆ ಟಿ ಮೇಘನಾ ಹಾಗಲ್ಲ. ಅಂಧೆಯಾದರೂ ಹಠ ಬಿಡದೆ ಯುಪಿಎಸ್ಸಿ ಪರೀಕ್ಷೆ ಬರೆದು 465ನೇ rank ಪಡೆದಿದ್ದಾರೆ.
ಹೌದು, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2019ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ 465ನೇ rank ಪಡೆದಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರಾದ ಇವರು ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ. ಇವರು ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ.
ಮೇಘನಾ ಅವರು ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಈ ವೈಕಲ್ಯವನ್ನು ಮೆಟ್ಟಿನಿಂತು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಯುಪಿಎಸ್ಸಿ ಪರೀಕ್ಷೆ ಗೆದ್ದ 37ಕ್ಕೂ ಹೆಚ್ಚು ಕನ್ನಡಿಗರು, ಯಶಸ್ವಿನಿ ಕರ್ನಾಟಕದ ಟಾಪರ್
ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಶಿಕ್ಷಣ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್ ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ rank ಪಡೆದು ಪಾಸಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.