newsics.com
ಬೆಂಗಳೂರು: ‘ಗಾನಗಂಧರ್ವ’ರೆಂದೇ ಹೆಸರಾಗಿದ್ದ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್(66) ಅವರು ಇನ್ನಿಲ್ಲ.
ಹೃದಯಾಘಾತದಿಂದ ಇಂದು(ಅ.12) ಮುಂಜಾನೆ ಅವರು ಕೊನೆಯುಸಿರೆಳೆದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ಇಂದು ಬೆಳಗ್ಗೆ 7.30ಕ್ಕೆ ಹೃದಯಾಘಾತಕ್ಕೊಳಗಾಗಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಣಪತಿ ಭಟ್ಟರು ಸುಮಾರು 4 ದಶಕಗಳಿಗೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಭಾಗವತರಾಗಿದ್ದರು. ಸುರತ್ಕಲ್, ಕರ್ನಾಟಕ, ಹೊಸನಗರ, ಎಡನೀರು, ಹನುಮಗಿರಿ ಸೇರಿದಂತೆ ಹಲವು ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿದ್ದರು.
26 ವರ್ಷ ಸುರತ್ಕಲ್ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಈ ಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮೊದಲ ಭಾಗವತ ಪದ್ಯಾಣ ಗಣಪತಿ ಭಟ್. ಇವರ ಭಾಗವತಿಕೆಗೆ ಎಸ್ಪಿಬಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು
ಭಾಗವತಿಕೆಯಲ್ಲಿ ತಮ್ಮದೇ ಆದ ಶೈಲಿ ಹುಟ್ಟುಹಾಕಿದ್ದ ಪದ್ಯಾಣ ಗಣಪತಿ ಭಟ್ಟ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಪದ್ಯಾಣ ಗಣಪತಿ ಭಟ್ಟ ಅವರ ನಿಧನಕ್ಕೆ ಯಕ್ಷಗಾನ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.