ಹೊಸ್ತೋಟ ಮಂಜುನಾಥ ಭಾಗವತರು ಇನ್ನಿಲ್ಲ

133

ಶಿರಸಿ: ಖ್ಯಾತ ಯಕ್ಷಗಾನ ಭಾಗವತರಾಗಿದ್ದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು (79) ಮಂಗಳವಾರ ನಿಧನರಾದರು. ಇಂದು ರಾತ್ರಿ ಅವರ ಅಂತ್ಯಕ್ರಿಯೆ ಶಿರಸಿ ಸಾಮ್ರಾಟ್ ಹೋಟೆಲ್ ಬಳಿಯಿರುವ ಸದ್ಗತಿ ವಿದ್ಯಾನಗರ ರುದ್ರಭೂಮಿಯಲ್ಲಿ ನಡೆಯಲಿದೆ.

ಲಿವರ್ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ಕೆಲ ದಿನಗಳಿಂದ ತಮ್ಮ ಆಪ್ತ ಸೋಂದಾ ಹಳೆಯೂರಿನ ಶ್ರೀಪಾದ ಜೋಶಿ ಅವರ ಮನೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

ಶಿರಸಿ ತಾಲೂಕಿನ ಹನುಮಂತಿ ಸಮೀಪದ ಹೊಸ್ತೋಟದವರಾದ ಮಂಜುನಾಥ ಭಾಗವತರು ಸಣ್ಣ ವಯಸ್ಸಿನಲ್ಲಿಯೇ ಯಕ್ಷಗಾನ ಮತ್ತು ಅಧ್ಯಾತ್ಮದ ಕಡೆ ಒಲವನ್ನು ತೋರಿದರು. ಹೀಗಾಗಿ, ಅವರು ಕಾರವಾರದ ರಾಮಕೃಷ್ಣ ಆಶ್ರಮದಲ್ಲಿ ಪರಿವ್ರಾಜಕ ವ್ರತ (ಸನ್ಯಾಸತ್ವ)ಸ್ವೀಕರಿಸಿದರು. ನಂತರದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕೆರೆಮನೆ ಶಿವರಾಮ ಹೆಗಡೆ ಅವರ ಶಿಷ್ಯರಾಗಿ, ಯಕ್ಷಗಾನದ ಎಲ್ಲ ವಿಭಾಗಗಳಲ್ಲಿ ಪರಿಣತಿ ಪಡೆದುಕೊಂಡರು. ನಂತರದ ದಿನಗಳಲ್ಲಿ ಯಕ್ಷಗಾನದ ಗುರುವಾಗಿ ಸುಮಾರು 75 ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿ 1600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಶಿವಮೊಗ್ಗದ ಶ್ರೀಶಾರದಾದೇವಿ ಅಂಧರ ವಿಕಾಸ ಕೇಂದ್ರದ ನೇತ್ರಹೀನ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಅವರಿಂದಲೇ ‘ಕಂಸ ವಧೆ’ ಪ್ರಸಂಗ ಪ್ರದರ್ಶನ ನಡೆಸಿದರು. ಈ ಪ್ರಸಂಗ 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶನ ಕಂಡು ದಾಖಲೆ ನಿರ್ವಿುಸಿತು. ಯಕ್ಷಗಾನ ಕವಿಯಾಗಿ 300ಕ್ಕೂ ಅಧಿಕ ಆಖ್ಯಾನಗಳನ್ನು ಭಾಗವತರು ಬರೆದಿದ್ದಾರೆ. 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿ ಅನೇಕ ಗೌರವಗಳು ಇವರಿಗೆ ಸಂದಿವೆ.

LEAVE A REPLY

Please enter your comment!
Please enter your name here