newsics.com
ಅಂಕೋಲಾ: ಕಾಡುಹಂದಿ ಮಾಂಸವೆಂದು ನಂಬಿಸಿ ಅಪರಿಚಿತ ಯುವಕರು ಸಿಕ್ಕ ಸಿಕ್ಕ ಪ್ರಾಣಿಗಳ ಮಾಂಸವನ್ನ ಮಾರಾಟ ಮಾಡಿರುವ ಘಟನೆ ಅಂಕೋಲಾದ ಮೊಗಟಾ, ಹಿಲ್ಲೂರು ಭಾಗದಲ್ಲಿ ನಡೆದಿದೆ.
ಅಂಕೋಲಾದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದ ಯುವಕರ ತಂಡ, ಗ್ರಾಮೀಣ ಭಾಗದ ಮಾಂಸ ಪ್ರಿಯರನ್ನ ಟಾರ್ಗೆಟ್ ಮಾಡಿ ಕಾಡು ಹಂದಿಯ ಮಾಂಸವೆಂದು ಕಡಿಮೆ ದರಕ್ಕೆ ಮಾಂಸ ಮಾರಾಟ ಮಾಡುತ್ತಿದ್ದರು. ಅಲೆಮಾರಿ ಜನಾಂಗದ ಈ ಯುವಕರು, ಗ್ರಾಮದ ಹತ್ತಾರು ಮನೆಗಳಿಗೆ ಮಾಂಸ ಮಾರಿದ್ದು, ಗ್ರಾಮಸ್ಥರು ಕೂಡ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆಯೆಂದು ಮಾಂಸ ಖರೀದಿಸಿದ್ದಾರೆ.
ಆದರೆ ಮಾಂಸದ ಬಗ್ಗೆ ಗ್ರಾಮಸ್ಥರಲ್ಲೇ ಅನುಮಾನ ಬಂದು ಚರ್ಚೆ ನಡೆಸಿ, ಯುವಕರ ಬಗ್ಗೆ ಕೆಲವರನ್ನ ಕೇಳಿದಾ ಈ ಯುವಕರು ನಾಯಿಗಳನ್ನ ಹಿಡಿಯುತ್ತಿರುವುದು ತಿಳಿದುಬಂದಿದೆ. ತಕ್ಷಣ ಮಾಂಸ ಬೇಕೆಂದು ಗ್ರಾಮಕ್ಕೆ ಯುವಕರನ್ನ ಕರೆಯಿಸಿಕೊಂಡು ಗ್ರಾಮಸ್ಥರು, ಯುವಕರನ್ನ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸರಿಯಾಗೇ ಗೂಸಾ ನೀಡಿದ್ದಾರೆ. ಬಳಿಕ ಯುವಕರನ್ನ ಪೊಲೀಸರಿಗೊಪ್ಪಿಸಲಾಗಿದೆ. ಆದರೆ ಕಡಿಮೆ ಬೆಲೆಯಲ್ಲಿ ಸಿಕ್ಕ ಮಾಂಸವನ್ನ ಬೇಯಿಸಿ ಭೋಜನ ಸವಿದವರಿಗೆ ಮಾತ್ರ ಇದೀಗ ಈ ಸತ್ಯವನ್ನ ಅರಗಿಸಿಕೊಳ್ಳೋದೆ ಕಷ್ಟ ಎಂಬಂತಾಗಿದೆ.