ಮುಂಬೈ: ಟೀಮ್ ಇಂಡಿಯಾದ ಆಲ್ರೌಂಡರ್ ಆಟಗಾರ ಇರ್ಫಾನ್ ಪಠಾಣ್(35) ಅವರು ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
2019ರ ಫೆಬ್ರವರಿ ತಿಂಗಳಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಆಡಿದ್ದೇ ಪಠಾಣ್ ಅವರ ಕೊನೆಯ ಪಂದ್ಯ. ಇನ್ನುಳಿದಂತೆ ಕಳೆದ ತಿಂಗಳು ನಡೆದ 2020ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲೂ ಪಠಾಣ್ ಬಿಕರಿಯಾಗಿಲ್ಲ. ಹೀಗಾಗಿ ವಿದಾಯಕ್ಕೆ ಇದು ಸೂಕ್ತ ಸಮಯವೆಂದು ಭಾವಿಸಿ ಪಠಾಣ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
2003ರಲ್ಲಿ ಅಡಿಲೇಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ಮೂಲಕ ಟೀಮ್ ಇಂಡಿಯಾದಲ್ಲಿ ಪಠಾಣ್ ಸ್ಥಾನ ಗಿಟ್ಟಿಸಿದ್ದರು. ತಮ್ಮ ಸ್ವಿಂಗ್ ಬಾಲ್ ಸಾಮರ್ಥ್ಯದಿಂದಲೇ ಪಠಾಣ್ ಬಹುಬೇಗನೇ ಯಶಸ್ಸು ಗಳಿಸಿದರು. ಪ್ರಾರಂಭದಲ್ಲಿ ಎಡಗೈ ಬೌಲರ್ ಆಗಿ ಬಂದ ಪಠಾಣ್ ಬಳಿಕ ಆಲ್ರೌಂಡರ್ ಆಗಿ ಬದಲಾದದ್ದು ಅಚ್ಚರಿಯೆ.
ಟೀಮ್ ಇಂಡಿಯಾ ಪರ 29 ಟೆಸ್ಟ್ ಪಂದ್ಯಗಳನ್ನಾಡಿರುವ ಪಠಾಣ್ 1105 ರನ್ ನೀಡಿ 100 ವಿಕೆಟ್ ಗಳಿಸಿದ್ದಾರೆ. 120 ಏಕದಿನ ಪಂದ್ಯಗಳಲ್ಲಿ 1544 ರನ್ಗೆ 173 ವಿಕೆಟ್ ಮತ್ತು 24 ಟಿ20 ಪಂದ್ಯಗಳಲ್ಲಿ 172 ರನ್ಗೆ 28 ವಿಕೆಟ್ ಪಡೆದಿದ್ದಾರೆ.
ಟೀಮ್ ಇಂಡಿಯಾದ 2007ರ ಟಿ20 ವಿಶ್ವಕಪ್ ಗೆಲುವಿನಲ್ಲೂ ಪಠಾಣ್ ಭಾಗಿಯಾಗಿದ್ದರು. ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಪಠಾಣ್ ಭಾಜನರಾಗಿದ್ದರು.
ಕ್ರಿಕೆಟ್ ಗೆ ಪಠಾಣ್ ಪೂರ್ಣ ವಿದಾಯ
Follow Us