♦ ಐದನೇ ಹಂತದ ವಂದೇ ಭಾರತ ಅಭಿಯಾನಕ್ಕೆ ಚಾಲನೆ
ನವದೆಹಲಿ: ಕೊರೋನಾ ಅಬ್ಬರಿಸುತ್ತಿರುವ ವೇಳೆಯಲ್ಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಶನಿವಾರ (ಆ.1) ವಂದೇ ಭಾರತ ಅಭಿಯಾನದ ಐದನೇ ಹಂತಕ್ಕೆ ಚಾಲನೆ ನೀಡಿದೆ.
ಐದನೇ ಹಂತದಲ್ಲಿ 53 ದೇಶಗಳಿಂದ 700 ವಿಮಾನಯಾನಗಳ ಮೂಲಕ 1.20 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ವಾಪಸ್ ಕರೆತರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಐದನೇ ಹಂತದಲ್ಲಿ ಏರ್ ಇಂಡಿಯಾ ತನ್ನ ಹೆಚ್ಚಿನ ವಿಮಾನಗಳ ನಿಯೋಜನೆಯನ್ನು ಮುಂದುವರಿಸಲಿದ್ದು, ಉತ್ತರ ಅಮೆರಿಕಕ್ಕೆ ಸುದೀರ್ಘ ಯಾನಗಳನ್ನೂ ಕೈಗೊಳ್ಳಲಿದೆ. ಬ್ರಿಟನ್ ಮತ್ತು ಕೆನಡಾಗಳಿಗೂ ಹೆಚ್ಚುವರಿ ಯಾನಗಳನ್ನು ಕೈಗೊಳ್ಳಲಿದೆ.
ಆಸ್ಟ್ರೇಲಿಯಾದಿಂದ ಸಿಬ್ಬಂದಿಯನ್ನು ಭಾರತಕ್ಕೆ ಕರೆತಂದ ವಿಪ್ರೋ
ಜು.30ರವರೆಗೆ ನಡೆದ ನಾಲ್ಕನೇ ಹಂತದಲ್ಲಿ ಏರ್ ಇಂಡಿಯಾ 617 ವಿಮಾನಯಾನಗಳನ್ನು ನಿರ್ವಹಿಸುವ ಮೂಲಕ ವಿದೇಶಗಳಲ್ಲಿ ಅತಂತ್ರರಾಗಿದ್ದ ಸುಮಾರು 1,10,383 ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿತ್ತು.
ಏರ್ ಇಂಡಿಯಾ ಮೇ 7ರಂದು ನವದೆಹಲಿಯಿಂದ ಸಿಂಗಾಪುರಕ್ಕೆ ಯಾನವನ್ನು ನಿರ್ವಹಿಸುವ ಮೂಲಕ ವಂದೇ ಭಾರತ ಅಭಿಯಾನದಡಿ ತನ್ನ ಮೊದಲ ತೆರವು ಕಾರ್ಯಾಚರಣೆಯನ್ನು ಕೈಗೊಂಡಿತ್ತು. ವಂದೇ ಭಾರತ ಅಭಿಯಾನವು ವಿಶ್ವದ ಅತ್ಯಂತ ದೊಡ್ಡ ತೆರವು ಕಾರ್ಯಾಚರಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.