ಉಡುಪಿ/ಬೆಂಗಳೂರು: ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 150 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮಂಗಳವಾರ 388 ಮಂದಿಗೆ ಸೋಂಕು ತಗುಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ತಿಳಿಸಿದೆ. ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಮಂಗಳವಾರ ಕುಂದಾಪುರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್, 150 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಎರಡು ದಿನಗಳಲ್ಲಿ ನಮಗೆ ಮೂರು ಸಾವಿರ ಗಂಟಲು ದ್ರವ ಪರೀಕ್ಷಾ ವರದಿ ಬಂದಿದೆ. ಕುಂದಾಪುರ ಮತ್ತು ಬೈಂದೂರಿನಲ್ಲಿ ಒಟ್ಟು 400 ಹಾಸಿಗೆಯ ಕೋವಿಡ್ ಆಸ್ಪತ್ರೆ ಸಿದ್ಧ
ಮಾಡುತ್ತಿದ್ದೇವೆ ಎಂದರು.
ಉಡುಪಿಯಲ್ಲಿ 210 ಪ್ರಕರಣಗಳು ದೃಢಪಟ್ಟಿದೆ ಎಂದು ಮಂಗಳವಾರ ಬೆಳಗ್ಗೆ ಸಚಿವ ಅರ್. ಅಶೋಕ್ ಮಾಹಿತಿ ನೀಡಿದ್ದರು. ಆದರೆ ಆರೋಗ್ಯ ಇಲಾಖೆ ವರದಿ 150 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ. ಹೀಗಾಗಿ ಅಶೋಕ್ ಹೇಳಿಕೆಯಲ್ಲಿರುವ ಸಂಖ್ಯೆಗೂ ಜಿಲ್ಲಾಧಿಕಾರಿಗಳು ನೀಡಿರುವ ಸಂಖ್ಯೆಗೂ 60 ಮಂದಿಯಷ್ಟು ಅಂತರವಿದೆ.
ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಬದಲಿಸಿ ಏಳು ದಿನಗಳ ಕ್ವಾರಂಟೈನ್ ಮುಗಿಸಿದವರನ್ನು ಮನೆಗೆ ಕಳುಹಿಸಿದೆ. ಮನೆಗೆ ಮರಳಿದ ನಂತರ ಬಹಳಷ್ಟು ಜನರ ಗಂಟಲು ದ್ರವ ಪರೀಕ್ಷೆಯ ವರದಿ ಬರುತ್ತಿದ್ದು, ಇದು ಆತಂಕ ಹೆಚ್ಚಿಸುವಂತೆ ಮಾಡಿದೆ.
ರಾಯಚೂರು ಜಿಲ್ಲೆಯಲ್ಲಿ 16 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಹಾಸನ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂಬೈನಿಂದ ಚನ್ನರಾಯಪಟ್ಟಣಕ್ಕೆ 10 ಮಂದಿ ಆಗಮಿಸಿದ್ದು, ಅವರಲ್ಲಿ 9 ಮಂದಿಗೆ ಸೋಂಕು ತಗುಲಿದೆ ಸೋಂಕಿತರ ಸಂಖ್ಯೆ 182 ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಉಡುಪಿ 150, ಕಲಬುರಗಿ 100, ಬೆಳಗಾವಿ 51, ರಾಯಚೂರು 16, ಬೆಂಗಳೂರು ನಗರ 12, ಬೀದರ್ 10, ಬಾಗಲಕೋಟೆ ಹಾಸನ 9, ದಾವಣಗೆರೆ 7, ಯಾದಗಿರಿ 5, ಮಂಡ್ಯ, ವಿಜಯಪುರದಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ 3, ಚಿಕ್ಕಬಳ್ಳಾಪುರ, ಧಾರವಾಡ, ಚಿಕ್ಕಮಗಳೂರಿನಲ್ಲಿ ತಲಾ 2, ಕೋಲಾರ, ಹಾವೇರಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.