ತಿರುವನಂತಪುರಂ: 2008ರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದ ಆರೋಪಿಯೊಬ್ಬನನ್ನು ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿ ಕಳೆದ 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಸೌದಿ ಅರೇಬಿಯಾದಿಂದ ಬಂದ ವಿಮಾನದಲ್ಲಿ ಇಳಿಯುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶೋಯೆಬ್ ಎಂದು ಗುರುತಿಸಲಾಗಿದೆ. ರಾಜ್ಯದ ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಷ್ಟ್ರೀಯ ತನಿಖಾದಳ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿದೆ.
2008 ಜುಲೈ 25 ರಂದು ಬೆಂಗಳೂರಿನಲ್ಲಿ ಸರಣಿ ಸ್ಫೋಟ ಸಂಭವಿಸಿತ್ತು. 9 ಸ್ಫೋಟ ವರದಿಯಾಗಿತ್ತು. ಈ ಸ್ಫೋಟದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಎಲ್ಲ ಸ್ಫೋಟಗಳು ಕಡಿಮೆ ತೀವ್ರತೆ ಹೊಂದಿದ್ದ ಕಾರಣ ಹೆಚ್ಚಿನ ಪ್ರಾಣ ಹಾನಿ ಸಂಭವಿಸಿರಲಿಲ್ಲ.