ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 145 ಕೊರೋನಾ ಸೋಂಕಿತರನ್ನು ಹೊಂದಿರುವ ಬೆಂಗಳೂರು ನಗರದಲ್ಲಿ 25 ವಾರ್ಡ್’ಗಳನ್ನು ಸೀಲ್ ಡೌನ್ ಮಾಡಿ ಬಿಬಿಎಂಪಿ ಆದೇಶ ಹೊಸದಾಗಿ ಹೊರಡಿಸಿದೆ.
ಏರುತ್ತಲೇ ಇರುವ ಕೊರೋನಾ ಸೋಂಕು ತಡೆಗಟ್ಟುವುದಕ್ಕಾಗಿ ಬಿಗಿ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ಈಗಾಗಲೇ ಸೀಲ್’ಡೌನ್ ಆಗಿರುವ ಪಾದರಾಯನಪುರ, ಬಾಪೂಜಿನಗರ, ಹೊಂಗಸಂದ್ರದ ಜತೆ ಉಳಿದ 25 ವಾರ್ಡ್’ಗಳನ್ನೂ ಸೀಲ್’ಡೌನ್ ಮಾಡಿರುವುದಾಗಿ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಬೆಂಗಳೂರಿನಿಂದ ಹೊರಹೋಗುವುದನ್ನು, ಬೆಂಗಳೂರಿನ ಒಳಬರುವುದಕ್ಕೆ ನಿರ್ಬಂಧ ವಿಧಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೂ ಸೇರಿಸಿಕೊಂಡು ಸರ್ಕಾರ ವಿಶೇಷ ನಿಯಮಾವಳಿ ರೂಪಿಸಿದ್ದು, ಬೆಂಗಳೂರನ್ನು ನಾಲ್ಕು ವಿಭಾಗಗಳನ್ನಾಗಿ ವಿಭಜಿಸಿದೆ. ಈ ಪೈಕಿ ಹಸಿರು ವಲಯಕ್ಕೆ ಸೇರಿರುವ 154 ವಾರ್ಡ್’ಗಳಲ್ಲಿ ಲಾಕ್’ಡೌನ್ ಸಡಿಲಿಸಲು ಮುಂದಾಗಿರುವ ಸರ್ಕಾರ, ಈ ವಲಯದಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.