ಬೆಂಗಳೂರು: ಸುಮಾರು 4.75 ಕೋಟಿಗೂ ಅಧಿಕ ಭಾರತೀಯ ಬಳಕೆದಾರರ ಟ್ರೂಕಾಲರ್ ಮಾಹಿತಿ ಸೋರಿಕೆಯಾಗಿದೆ.
ಆನ್ಲೈನ್ ಗುಪ್ತಚರ ಸಂಸ್ಥೆ ಸೈಬಲ್ ಈ ಆಘಾತಕಾರಿ ಮಾಹಿತಿ ನೀಡಿದೆ. ಭಾರತದ ಟ್ರೂಕಾಲರ್ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಲಾಗಿದ್ದು, ಡಾರ್ಕ್ ವೆಬ್’ನಲ್ಲಿ 75,000 ರೂ.ಗಳಿಗೆ ಮಾಹಿತಿ ಬಿಕರಿಯಾಗಿದೆ.
ಸೈಬಲ್ ಕಲೆ ಹಾಕಿರುವ ಮಾಹಿತಿ ಪ್ರಕಾರ, ಟ್ರೂಕಾಲರ್ ಬಳಕೆದಾರರ ದಾಖಲೆಗಳನ್ನು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕಿಡಲಾಗಿತ್ತು. ಸೈಬರ್ ಕ್ರೈಂನಲ್ಲಿ ಕುಖ್ಯಾತಿ ಪಡೆದಿರುವ ಡಾಟಾ ಟ್ರೋವ್ ಎಂಬ ಕಂಪನಿ ಹೆಸರಿನಲ್ಲಿ ಈ ಡೀಲ್ ಮಾಡಲಾಗುತ್ತಿದೆ.
47.5 ಮಿಲಿಯನ್ ಟ್ರೂಕಾಲರ್ ದಾಖಲೆಗಳನ್ನು 1,000 ಡಾಲರ್ಗೆ (ಸುಮಾರು 75,000 ರೂ.) ಕಂಪನಿಯೊಂದು ಖರೀದಿಸಿರುವ ಮಾಹಿತಿ ಸಿಕ್ಕಿದೆ. ಯಾರ ಯಾರ ಯಾವ ಯಾವ ಮಾಹಿತಿ ಸೋರಿಕೆಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಬಳಕೆದಾರರ ಫೋನ್ ನಂಬರ್, ಯಾವ ಕಂಪನಿ ಸೇವೆ ಪಡೆದಿದ್ದಾರೆ, ಬಳಕೆದಾರರ ಹೆಸರು, ಇಮೇಲ್, ಫೇಸ್ಬುಕ್ ಖಾತೆ ಐಡಿ, ಐಡೆಂಟಿಟಿ ಪ್ರೂಫ್ ದಾಖಲೆ ಎಲ್ಲವೂ ಸೈಬರ್ ಕಳ್ಳರ ಪಾಲಾಗಿದೆ ಎಂದು ತನ್ನ ಬ್ಲಾಗ್’ನಲ್ಲಿ ಸೈಬಲ್ ಪ್ರಕಟಿಸಿದೆ.
ಆದರೆ ಈ ಮಾಹಿತಿಯನ್ನು ಟ್ರೂಕಾಲರ್ ವಕ್ತಾರರು ತಳ್ಳಿ ಹಾಕಿದ್ದು, ಡೇಟಾಬೇಸ್ನ ಯಾವುದೇ ಉಲ್ಲಂಘನೆ ಸಂಭವಿಸಿಲ್ಲ ಮತ್ತು ನಮ್ಮ ಎಲ್ಲಾ ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿದೆ ಎಂದು ಸೈಬಲ್ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.