newsics.com
ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸುವ ರೀತಿ ಪ್ರೇಯಸಿ ಶ್ರದ್ಧಾಳನ್ನು ಹತ್ಯೆಗೈದಿದ್ದಲ್ಲದೆ, ದೆಹಲಿಯ ಬೀದಿ ಬೀದಿಗಳಲ್ಲಿ ಎಸೆದ ಪ್ರಕರಣದ ಹಿಂದಿನ ಕರಾಳ ಸಂಗತಿಗಳು ಹೊರಬರುತ್ತಲೇ ಇವೆ.
ಶ್ರದ್ಧಾಳನ್ನು ಕೊಲೆ ಮಾಡಿ ಬಳಿಕ ಆಕೆಯ ಮೃತದೇಹವನ್ನು 35 ತುಂಡುಗಳಾಗಿಸಿ ಫ್ರಿಜ್ನಲ್ಲಿಟ್ಟ ಆರೋಪಿ ಅಫ್ತಾಬ್ ಇನ್ನೊಬ್ಬ ಗೆಳತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಶ್ರದ್ಧಾ ಕೊಲೆಯ ಬಳಿಕ ಅಫ್ತಾಬ್ ಬಂಬ್ಲ್ ಎಂಬ ಡೇಟಿಂಗ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮತ್ತೊಂದು ಮಹಿಳೆಯ ಸಂಪರ್ಕ ಸಾಧಿಸಿದ್ದ. ಶ್ರದ್ಧಾ ದೇಹದ ಕತ್ತರಿಸಿ ತುಂಡಾಗಿಸಿ, ಅದನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯ ಅಪಾರ್ಟ್ಮೆಂಟ್ನ ಫ್ರಿಡ್ಜ್ನಲ್ಲಿ ಇಟ್ಟಿರುವಾಗಲೇ ಹೊಸ ಗೆಳತಿಯನ್ನು ಮನೆಗೆ ಕರೆತಂದಿದ್ದ. ಶ್ರದ್ಧಾಳನ್ನು ಕೂಡ ಈತ 2019ರಲ್ಲಿ ಇದೇ ಆ್ಯಪ್ನಲ್ಲಿ ಭೇಟಿಯಾಗಿದ್ದ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಹೇಳಿದೆ.
ಈ ಹೊಸ ಗೆಳತಿ ಜೂನ್ ಮತ್ತು ಜುಲೈನಲ್ಲಿ ಕೆಲವು ಸಲ ಅಫ್ತಾಬ್ ಅಪಾರ್ಟ್ಮೆಂಟ್ಗೆ ಭೇಟಿ ನೀಡಿದ್ದಾಳೆ. ಅಡುಗೆ ಕೋಣೆಯ ಫ್ರಿಡ್ಜ್ನಲ್ಲಿ ಶ್ರದ್ಧಾ ದೇಹದ ಭಾಗಗಳಿರುವಾಗಲೇ ಈತ ಹೊಸ ಗೆಳತಿಗೆ ಮನೆಯಲ್ಲೇ ಆತಿಥ್ಯ ನೀಡಿದ್ದಾನೆ.
ಶ್ರದ್ಧಾ ಕೊಲೆಯ ನಂತರ ಆಕೆಯ ಕ್ರೆಡಿಟ್ ಕಾರ್ಡ್ಗಳ ಬಿಲ್ಗಳನ್ನು ಈತ ಪಾವತಿಸಿದ್ದ. ಆಕೆಯ ಸಾಮಾಜಿಕ ಜಾಲತಾಣದ ಪುಟಗಳಿಗೆ ಲಾಗಿನ್ ಆಗಿ ಮೆಸೇಜ್ಗಳಿಗೆ ಉತ್ತರಿಸಿದ್ದ. ಪೋಸ್ಟ್ಗಳನ್ನು ಮಾಡಿದ್ದ. ಆಕೆ ಬದುಕಿದ್ದಾಳೆ ಎಂದು ಬಿಂಬಿಸಲು ಆಕೆಯ ಸ್ನೇಹಿತರಿಗೆ ಆಕೆಯ ಖಾತೆಯಿಂದ ಸಂದೇಶಗಳನ್ನು ಕೂಡ ಕಳುಹಿಸಿದ್ದ ಎಂಬುದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ಸಂಬಂಧದ ಕುರಿತು ಅನುಮಾನಗೊಂಡಿದ್ದ ಇಬ್ಬರೂ ಫೋನ್ ಜಿಪಿಎಸ್ ಮತ್ತು ಫೋಟೊಗಳನ್ನು ಟ್ರೇಸ್ ಮಾಡುತ್ತಿದ್ದರು. ಸಂಬಂಧ ಸುಧಾರಣೆಗಾಗಿ ಏಪ್ರಿಲ್ನಲ್ಲಿ ಹಿಮಾಚಲ ಪ್ರದೇಶ ಪ್ರವಾಸ ಯೋಜಿಸಿದ್ದರು.
ಮೇ 15ರಂದು ದೆಹಲಿಗೆ ಸ್ಥಳಾಂತರಗೊಂಡ 3 ದಿನಗಳ ನಂತರ ಮತ್ತೆ ಜಗಳವಾಗಿದ್ದು, ಶ್ರದ್ಧಾಳನ್ನು ಕೊಲೆಗೈದಿದ್ದಾನೆ. ಅಫ್ತಾಬ್ ಅಮೆರಿಕದ ಕ್ರೈಂ ಸರಣಿ ‘ಡೆಕ್ಸ್ಟರ್’ನಿಂದ ಸ್ಫೂರ್ತಿ ಪಡೆದಿದ್ದ ಎನ್ನಲಾಗಿದೆ.
ಅಫ್ತಾಬ್ ಇದೇ ರೀತಿ 3–4 ಹುಡುಗಿಯರಿಗೆ ಮೋಸ ಮಾಡಿದ್ದಾನೆ ಎಂಬ ಪೋಸ್ಟರ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.