ಕ್ಯಾಲಿಕಟ್: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳಕ್ಕೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಕೋಳಿಕ್ಕೊಡ್ ವಿಮಾನ ನಿಲ್ದಾಣ ರನ್ವೇನಲ್ಲಿ ಸ್ಕಿಡ್ ಆಗಿದೆ. ಪೈಲಟ್ ಸೇರಿ ಮೂವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಓರ್ವ ಪೈಲಟ್ ಹಾಗೂ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದು, ಗಾಯಗೊಂಡಿರುವ 35 ಮಂದಿಯನ್ನು ಕೊಂಡಾಟಿ ರಿಲೀಫ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಾನದಲ್ಲಿ 174 ಪ್ರಯಾಣಿಕರು, 10 ಶಿಶುಗಳು, ಇಬ್ಬರು ಪೈಲಟ್ಸ್ ಮತ್ತು 5 ಕ್ಯಾಬಿನ್ ಸಿಬ್ಬಂದಿ ಇದ್ದರು. ಕೋ ಪೈಲಟ್ ಗಂಭೀರ ಗಾಯವಾಗಿದೆ. ವಿಮಾನ 7.38ಕ್ಕೆ ಲ್ಯಾಂಡಿಂಗ್ ಆಗಿತ್ತು. ಆದರೆ, ನಿಯಂತ್ರಣ ತಪ್ಪಿ 30 ಅಡಿ ಕೆಳಗೆ ಬಿದ್ದಿದೆ. ಇದರಿಂದಾಗಿ ವಿಮಾನ ಎರಡು ಭಾಗಗಳಾಗಿವೆ. ಪೈಲಟ್ಗೆ ರನ್ ವೇ ಸ್ಪಷ್ಟವಾಗಿ ಕಾಣದೆ ಅಪಫಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಸಂಜೆ 7:40 ರ ಹೊತ್ತಿಗೆ ಈ ಘಟನೆ ನಡೆದಿದೆ. ದುಬೈನಿಂದ ಕೋಳಿಕ್ಕೊಡ್ ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (IX-1344) ಸ್ಕಿಡ್ ಆಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ. ವಿಮಾನವು ಎರಡು ತುಂಡುಗಳಾಗಿ ಒಡೆದಿದ್ದು, ಅದರ ಅವಶೇಷಗಳು ರನ್ವೇ ಮತ್ತು ಅದರಾಚೆಗೆ ಹರಡಿಕೊಂಡಿವೆ. ಅದೃಷ್ಟವಶಾತ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ದುಬೈ-ಕೊಜಿಕೋಡ್ ನಡುವಿನ ಮಾರ್ಗದ ಬೋಯಿಂಗ್ 737 ಎಕ್ಸ್ 1344 ವಿಮಾನದಲ್ಲಿ 191 ಪ್ರಯಾಣಿಕರನ್ನು ಹೊಂದಿತ್ತು ಎನ್ನಲಾಗಿದ್ದು, ಸಂಜೆ 7: 41 ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನಯಾನ ಮೂಲಗಳ ಪ್ರಕಾರ, ಇದು ರನ್ವೇಯನ್ನು ಓವರ್ ಶಾಟ್ ಮಾಡಿದಂತೆ ಕಂಡುಬಂದಿದೆ ಎನ್ನಲಾಗುತ್ತಿದೆ. ಕನಿಷ್ಠ 24 ಆಂಬುಲೆನ್ಸ್ಗಳು ಮತ್ತು ಅಗ್ನಿಶಾಮಕ ಟೆಂಡರ್ಗಳನ್ನು ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ.
ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದು ದಶಕಗಳ ಹಿಂದೆ ನಡೆದ ಮಂಗಳೂರು ವಿಮಾನ ದುರಂತವನ್ನು ನೆನಪಿಸಿದೆ. ಈ ವಿಮಾನದಲ್ಲಿ 191 ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದ್ದು, ಪೈಲಟ್ ಸಾವಿನ ಸುದ್ದಿ ಹೊರಬರುತ್ತಿದೆ. 2 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯೂ ಇದೆ. ವಿಮಾನದ ಮುಂಭಾಗದ ಭಾಗವು ಭಾರೀ ಪ್ರಮಾಣದಲ್ಲಿ ಹಾನಿಗೊಂಡಿದೆ. ಭಾರೀ ಮಳೆಯಿಂದಾಗಿ ಈ ವಿಮಾನ ಅಪಾಘಾತಕ್ಕೆ ಈಡಾಗಿದೆ ಎಂದು ಹೇಳಲಾಗುತ್ತದೆ. ಲ್ಯಾಂಡ್ ಆದ ವಿಮಾನ ರನ್ವೇಗೆ ತಲುಪಿದ ಕೆಲವೇ ಕ್ಷಣದಲ್ಲಿ ರನ್ ವೇ ಇಂದ ಜಾರಿದೆ. ಬಳಿಕ ಇದು 30 ಅಡಿ ಆಳದಕ್ಕೆ ತಳ್ಳಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಬೆಳಗ್ಗೆ 6.15ಕ್ಕೆ ನಡೆದ ವಿಮಾನ ಅಪಘಾತಕ್ಕೆ ಸರಿ ಸಮಾನಾಗಿ ಈ ದುರಂತವನ್ನು ಪರಿಗಣಿಸಲಾಗುತ್ತಿದೆ. ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶು, 6 ಮಂದಿ ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ 8 ಮಂದಿ ಬದುಕುಳಿದಿದ್ದರು. ಕ್ಯಾಲಿಕಟ್ನಂತೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ವಿಮಾನ ದುರಂತಕ್ಕೀಡಾಗಿತ್ತು. ರನ್ವೇಗೆ ಇಳಿದ ವಿಮಾನ ಸ್ವಲ್ಪ ದೂರ ಕ್ರಮಿಸಿ ನೋಡುತ್ತಿದ್ದಂತೆಯೇ ವಿಮಾನ ಎರಡು ತುಂಡಾಗಿ ಹೊತ್ತಿ ಉರಿದಿತ್ತು.
ಕೋಳಿಕ್ಕೊಡ್’ನಲ್ಲಿ ವಿಮಾನ ಸ್ಕಿಡ್; ಪೈಲಟ್ ಸೇರಿ ಮೂವರ ಸಾವು, 35 ಮಂದಿಗೆ ಗಾಯ
Follow Us