ಬೀಜಿಂಗ್: ಕೊರೋನಾಗೆ ಜಗತ್ತೇ ತತ್ತರಿಸಿರುವ ಬೆನ್ನಲ್ಲೇ ಇನ್ನೊಂದು ಆತಂಕಕಾರಿ ವೈರಸ್’ಗೆ ಚೀನಾ ಉಗಮಸ್ಥಾನವಾಗಿದೆ. ಈ ಮೂಲಕ ವಿಶ್ವಕ್ಕೆ ಮತ್ತೆ ಕಂಟಕವಾಗುವ ಮುನ್ಸೂಚನೆ ನೀಡಿದೆ.
ಈ ವೈರಸ್’ನ್ನು ವಿಜ್ಞಾನಿಗಳು G4 EA H1N1 ಎಂದು ಕರೆದಿದ್ದು 2009ರಲ್ಲಿ ಕಾಣಿಸಿಕೊಂಡ ಹಂದಿಜ್ವರದ ಮಾದರಿಯಲ್ಲೇ ಈ ವೈರಸ್ ಮನುಷ್ಯ ದೇಹದಲ್ಲಿ ದ್ವಿಗುಣಗೊಂಡು ಕೊನೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನಕಾರರು ಅಭಿಪ್ರಾಯಿಸಿದ್ದಾರೆ.
2009ರಲ್ಲಿ ಕಾಣಿಸಿಕೊಂಡ ಹಂದಿಜ್ವರದ ವೈರಸ್ ರೀತಿಯಲ್ಲೇ ಇರುವ ವೈರಸ್ ಇದಾಗಿದ್ದರೂ ಕೆಲವು ಬದಲಾವಣೆಗಳನ್ನು ವೈರಸ್ ಹೊಂದಿದೆ. ಸದ್ಯಕ್ಕೆ ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಆದರೂ ಹಂದಿ ಸಾಕಾಣಿಕೆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಬಗ್ಗೆ ವಿಶೇಷ ನಿಗಾ ವಹಿಸಲಾಗಿದ್ದು, 2011 ರಿಂದ 18 ರವರೆಗಿನ ಅಂಕಿ ಅಂಶಗಳ ಪ್ರಕಾರ ಈ ವೈರಸ್ ಕಾರ್ಮಿಕರಲ್ಲಿ ದ್ವಿಗುಣಗೊಂಡಿರುವ ಸಾಕ್ಷ್ಯಲಭ್ಯವಾಗಿದೆ.
ಹೀಗಾಗಿ ಈ ವೈರಸ್ ಹಂದಿಗಳಿಂದ ಮಾನವನಿಗೆ ಹರಡುವ ಮುನ್ಸೂಚನೆ ಲಭ್ಯವಾಗಿದ್ದು, ವಿಜ್ಞಾನಿಗಳು ಈ ಅಂಶವನ್ನು ಕಡೆಗಣಿಸುವಂತಿಲ್ಲ. ನಿಯಂತ್ರಣಕ್ಕೆ ಅಗತ್ಯ ಅಧ್ಯಯನ ನಡೆಸುವ ಪ್ರಯತ್ನ ನಡೆದಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.