ನವದೆಹಲಿ: ಭಾರತದ ಗಡಿ ರಕ್ಷಣೆಗೆ ನಿಂತಿರುವ ಸೇನಾಪಡೆಗೆ ಪರಮಾಧಿಕಾರ ನೀಡಲಾಗಿದ್ದು, ಒಂದಿಂಚೂ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಚೀನಾವನ್ನು ಎಚ್ಚರಿಸಿದ್ದಾರೆ.
ದೇಶದ ಯಾವುದೇ ಪ್ರದೇಶವನ್ನು ಚೀನಾ ಸೇನೆಯು ಅತಿಕ್ರಮಣ ಮಾಡಿಕೊಂಡಿಲ್ಲ. ಅದಕ್ಕೆ ಭಾರತೀಯ ಸೇನೆಯು ಯಾವುದೇ ಕಾರಣಕ್ಕೂ ಅವಕಾಶವನ್ನೂ ನೀಡುವುದಿಲ್ಲ. ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನವದೆಹಲಿಯಲ್ಲಿ ನಡೆದ ವರ್ಚುಯಲ್ ಸರ್ವಪಕ್ಷ ಸಭೆಯ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಭೂಪ್ರದೇಶದ ಒಂದಿಂಚೂ ಜಾಗದ ಮೇಲೆ ಯಾರೇ ಕಣ್ಣು ಹಾಕಿದರೂ ಸುಮ್ಮನೆ ಬಿಡುವುದಿಲ್ಲ ಎಂಬ ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ಕೇಂದ್ರ ಸರ್ಕಾರವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಅಗತ್ಯ ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಮಾಧಿಕಾರವನ್ನು ಸೇನೆಗೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಲಡಾಖ್ ಗಡಿ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಭಾರತೀಯ ಸೇನೆಯು ಗಡಿಯಲ್ಲಿ ಗಸ್ತು ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ಹೇಳಿದರು.