ನವದೆಹಲಿ: ಕೊರೋನಾ ಕರ್ತವ್ಯದಲ್ಲಿದ್ದ ಭಾರತೀಯ ವಾಯುಪಡೆಯ ಚೇತಕ್ ಹೆಲಿಕಾಪ್ಟರ್ ಶುಕ್ರವಾರ ಹರ್ಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ವಾಯುಪಡೆಯ ಅಧಿಕಾರಿಗಳು ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಹರ್ಯಾಣದ ಸೋನೆಪತ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಯಾವುದೇ ಅಪಾಯವಿಲ್ಲದೆ ತುರ್ತು ಭೂಸ್ಪರ್ಶ ಮಾಡಿದೆ. ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ದೋಷ ಕಾಣಿಸಿಕೊಂಡ ಬಳಿಕ ಭೂ ಸ್ಪರ್ಶ ಮಾಡಲಾಗಿದೆ. ಇಂಜಿನ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಭೂ ಸ್ಪರ್ಶ ಮಾಡಲಾಗಿದೆ ಎಂದು ಹೇಳಲಾಗಿದೆ.
ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ನಲ್ಲಿ ಪೈಲೆಟ್ ಮಾತ್ರ ಇದ್ದ ಎಂದು ತಿಳಿದುಬಂದಿದೆ. ದೆಹಲಿಯಿಂದ ವಾಯುಪಡೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಹೆಲಿಕಾಪ್ಟರ್ ಪರಿಶೀಲನೆ ನಡೆಸುತ್ತಿದ್ದಾರೆ. 2020ರ ಫೆಬ್ರವರಿಯಲ್ಲಿ ಚಂಡೀಗಢದಲ್ಲಿ ಚೇತಕ್ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿತ್ತು. 2018ರಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ಇದೇ ಮಾದರಿಯ ಹೆಲಿಕಾಪ್ಟರ್ ಅರಕೋಣಂ ಐಎನ್ಎಸ್ ನೌಕಾನೆಲೆಯಲ್ಲಿ ಪತನಗೊಂಡಿತ್ತು.