ನವದೆಹಲಿ: ಸದ್ಯಕ್ಕೆ ದೇಶೀ ವಿಮಾನಗಳಲ್ಲಿ ಕ್ಯಾಬಿನ್ ಲಗೇಜ್ಗೆ ಅವಕಾಶವಿಲ್ಲ ಹಾಗೂ 80 ವರ್ಷ ಮೀರಿದವರು ವಿಮಾನಯಾನ ಕೈಗೊಳ್ಳುವಂತಿಲ್ಲ.
ಮೊದಲ ಹಂತದಲ್ಲಿ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಸರ್ಕಾರ ಸಿದ್ಧಪಡಿಸಿರುವ ಕರಡು ಮಾರ್ಗಸೂಚಿ ಪ್ರಕಾರ, ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಮಧ್ಯದ ಆಸನವನ್ನು ಖಾಲಿ ಬಿಡುವುದು ಕಡ್ಡಾಯ. ಟರ್ಮಿನಲ್ ನಲ್ಲಿ ಗೇಟ್ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಯಾಣಿಕರ ಗುರುತಿನ ಚೀಟಿ ತಪಾಸಣೆ ಇರುವುದಿಲ್ಲ. ಎಲ್ಲ ಪ್ರಯಾಣಿಕರು ಆರೋಗ್ಯಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯ.
ಮನೆಯಲ್ಲೇ ವೆಬ್ ಚೆಕ್-ಇನ್ ಪೂರ್ಣಗೊಳಿಸಿದ ಬಳಿಕ ಎಲ್ಲ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು. ವಿಮಾನ ನಿಲ್ದಾಣದಲ್ಲಿ ವರದಿ ಮಾಡಿಕೊಳ್ಳುವ ಅವಧಿಯನ್ನು ಎರಡು ಗಂಟೆ ಹೆಚ್ಚಿಸಲಾಗಿದೆ. ಮುಂದಿನ ಆರು ಗಂಟೆಯ ಅವಧಿಯಲ್ಲಿ ಹೊರಡುವ ವಿಮಾನಗಳ ಪ್ರಯಾಣಿಕರನ್ನಷ್ಟೇ ವಿಮಾನ ನಿಲ್ದಾಣದೊಳಕ್ಕೆ ಬಿಡಲಾಗುತ್ತದೆ.
ಕ್ಯಾಬಿನ್ ಲಗೇಜ್ ಒಯ್ಯಲು ಅವಕಾಶವಿಲ್ಲ. ಅಂತೆಯೇ 20 ಕೆ.ಜಿ.ಗಿಂತ ಕಡಿಮೆ ತೂಕದ ಒಂದು ಚೆಕ್ ಇನ್ ಬ್ಯಾಗೇಜ್ಗೆ ಮಾತ್ರ ಅವಕಾಶ ಇರುತ್ತದೆ. ವಯಸ್ಸು ಅಥವಾ ದೇಹದ ಉಷ್ಣತೆ ಅಧಿಕ ಇರುವ ಕಾರಣದಿಂದ ವಿಮಾನ ಏರಲು ಆಗದಿದ್ದರೆ, ಅಂಥವರು ಯಾವುದೇ ದಂಡ ಇಲ್ಲದೇ ಪ್ರಯಾಣ ದಿನಾಂಕವನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ.