ಬೆಂಗಳೂರು: ನಗರದಲ್ಲಿ ಸಾವಿರಾರು ಜನರು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದರೂ, ಮಾನಸಿಕವಾದ ಒತ್ತಡ ನಿರ್ವಹಣೆ, ಜನರ ವರ್ತನೆ ಎದುರಿಸಲಾಗದೇ ಸೋಲುತ್ತಿದ್ದಾರೆ. ಇಂತಹವರಿಗಾಗಿ ಬಿಬಿಎಂಪಿ ಕೌನ್ಸಲಿಂಗ್ ನಡೆಸಲು ಮುಂದಾಗಿದೆ. ಅಲ್ಲದೇ ಕೌನ್ಸಲಿಂಗ್ ವೇಳೆ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರನ್ನು ಪ್ಲಾಸ್ಮಾ ದಾನಕ್ಕೂ ಮನವೊಲಿಸುವ ಪ್ರಯತ್ನ ನಡೆಸಲಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಈ ಕುರಿತು ಮಾಹಿತಿ ನೀಡಿದ್ದು, ಕೊರೋನಾ ಸೋಂಕು ವ್ಯಕ್ತಿಯನ್ನು ಜರ್ಜರಿತನನ್ನಾಗಿ ಮಾಡುತ್ತದೆ. ಇದರೊಂದಿಗೆ ಸಮಾಜದ ವರ್ತನೆ,ನೆರೆಹೊರೆಯವರು ನೋಡುವ ರೀತಿ, ಸಂಬಂಧಿಕರ ಕುಹಕ ಹೀಗೆ ಎಲ್ಲವೂ ರೋಗಿಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಹೀಗಾಗಿ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಕೌನ್ಸಲಿಂಗ್ ನಡೆಸಲು ಸಿದ್ಧತೆ ನಡೆದಿದೆ ಎಂದಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿದ್ದು, ಅದನ್ನು ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಗುಣಮುಖರಾದವರನ್ನು ಪ್ಲಾಸ್ಮಾ ದಾನ ಮಾಡುವಂತೆಯೂ ಮನವೊಲಿಸಲಾಗುವುದು ಎಂದು ಪ್ರಸಾದ್ ಮಾಹಿತಿ ನೀಡಿದ್ದಾರೆ.
ಸೋಂಕಿನಿಂದ ಗುಣಮುಖರಾದವರೊಂದಿಗೆ ವೈದ್ಯರು ಮಾತನಾಡಲಿದ್ದು, ರೋಗಿಯ ಹಿನ್ನೆಲೆ,ಉದ್ಯೋಗ,ವಿದ್ಯಾರ್ಹತೆ,ಆರೋಗ್ಯ ಸ್ಥಿತಿ,ಕುಟುಂಬ ಎಲ್ಲದರ ಬಗ್ಗೆಯೂ ಮಾಹಿತಿ ಪಡೆದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಕೌನ್ಸಲಿಂಗ್
Follow Us