ನಗರದ ಕಸದ ಸಮಸ್ಯೆಗೆ ಇತಿಶ್ರೀ ಹಾಡಲು ಇನ್ನಿಲ್ಲದ ಸರ್ಕಸ್ ನಡೆಸಿರುವ ಬಿಬಿಎಂಪಿ, ಸೆಪ್ಟೆಂಬರ್ 20 ರಿಂದ ಕಸದ ಸಂಗ್ರಹಣೆಯಲ್ಲಿ ಬದಲಾವಣೆ ತರಲು ಸಿದ್ಧವಾಗಿದ್ದು, ಪ್ರಾಯೋಗಿಕವಾಗಿ ನಗರದ 38 ವಾರ್ಡಗಳಲ್ಲಿ ಯೋಜನೆ ಜಾರಿಗೆ ಬರಲಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈಗಾಗಲೇ ಅಧಿಕಾರಿಗಳ ಜೊತೆ ಈ ಬಗ್ಗೆ ಸಭೆ ನಡೆಸಿದ್ದು, ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಈ ಯೋಜನೆಯಂತೆ ಮೊದಲ ಹಂತದಲ್ಲಿ 38 ವಾರ್ಡಗಳನ್ನು ಗುರುತಿಸಲಾಗಿದ್ದು, ಈ ಏರಿಯಾಗಳಲ್ಲಿ 100ಕ್ಕೆ 100 ರಷ್ಟು ಹಸಿ ಕಸ,ಒಣ ಕಸ ಹಾಗೂ ಸ್ಯಾನಿಟರಿ ವೇಸ್ಟ್ ವಿಗಂಡಿಸುವಂತೆ ನೋಡಿಕೊಳ್ಳಲಾಗುತ್ತದೆ.
ಒಂದೊಮ್ಮೆ ಹಸಿ ಕಸ ಒಣ ಕಸ ವಿಂಗಡಿಸದೇ ಕೊಟ್ಟಲ್ಲಿ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾರ್ಷಲ್‍ಗಳ ಸಹಾಯ ಪಡೆಯಲು ಬಿಬಿಎಂಪಿ ನಿರ್ಧರಿಸಿದೆ. ಆಯ್ದ ವಾರ್ಡಗಳಲ್ಲಿ ಧ್ವನಿವರ್ಧಕ ಹಾಗೂ ಕಸ ಸಂಗ್ರಾಹಕರ ಮೂಲಕ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಬಿಬಿಎಂಪಿ ಮಾಡಲಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಈ ಪ್ರಯೋಗವನ್ನು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ 78 ವಾರ್ಡಗಳಿಗೆ ವಿಸ್ತರಿಸುವ ಚಿಂತನೆಯಲ್ಲಿದೆ.
ವಾರಕ್ಕೆ ಎರಡು ಬಾರಿ ಈ ರೀತಿ ಕಸ ಸಂಗ್ರಹಿಸಿ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಅಲ್ಲದೇ ಈ ರೀತಿ ವಿಂಗಡಿಸಿ ಕಸ ಸಂಗ್ರಹಿಸುವ ವಾರ್ಡಗಳಲ್ಲಿ ಯಾವುದೇ ಸ್ಥಳದಲ್ಲೂ ಕಸ ಸಂಗ್ರಹವಾಗದಂತೆ ನೋಡಿಕೊಳ್ಳಲು ಸ್ಥಳೀಯ ಅಧಿಕಾರಿಗಳು ಹಾಗೂ ಮಾರ್ಷಲ್‍ಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ. ಒಟ್ಟಿನಲ್ಲಿ ನಗರದ ಕಸದ ಸಮಸ್ಯೆಗೆ ಬಿಬಿಎಂಪಿ ಹೊಸ ಪ್ರಯೋಗದ ಮೂಲಕ ಉತ್ತರ ಹುಡುಕಲು ಹೊರಟಿದೆ.
ಸೆಪ್ಟೆಂಬರ್ 20 ರಿಂದ ನಗರದ ಕಸ ಸಂಗ್ರಹಣೆಗೆ ಹೊಸನಿಯಮ
Follow Us