ಬೆಂಗಳೂರು: ಕೇಂದ್ರದಲ್ಲಿ ಎರಡನೇ ಬಾರಿಗೆ ಗದ್ದುಗೆಗೇರುತ್ತಿದ್ದಂತೆ ಮುಂದಿನ ಐದು ವರ್ಷಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಘೋಷಿಸಿದ್ದ ಬಿಜೆಪಿ, ಕೇವಲ ಎರಡು ತಿಂಗಳಲ್ಲಿ ಎರಡು ರಾಜ್ಯಗಳಲ್ಲಿ ಅಡಳಿತವನ್ನು ಕಳೆದುಕೊಂಡಿದೆ.
ಇದರಿಂದ ಕಳೆದ ಒಂದು ವರ್ಷದಲ್ಲಿ ಐದು ರಾಜ್ಯಗಳು ಕೇಸರಿ ಪಡೆಯ ‘ಕೈ’ ತಪ್ಪಿದಂತಾಗಿದೆ. ಇಂದು ಪ್ರಕಟಗೊಂಡ ಜಾರ್ಖಂಡ್ ಚುನಾವಣಾ ಫಲಿತಾಂಶದಲ್ಲಿ ೮೧ ಸ್ಥಾನಗಳ ಪೈಕಿ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಮೂರು ಪಕ್ಷಗಳ ಮೈತ್ರಿಕೂಟ ಮ್ಯಾಜಿಕ್ ಸಂಖ್ಯೆಯ ಗಟಿ ದಾಟಿದೆ.
ಕಳೆದೊಂದು ವರ್ಷದಲ್ಲಿ ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್
ಘಡ, ಹಾಗೂ ಜಾರ್ಖಂಡ್‌ನಲ್ಲಿ ಅಧಿಕಾರ
ಕಳೆದುಕೊಂಡಿದೆ.
ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ
ಬಂದರೂ ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದು ಹಿರಿಯ ಬಿಜೆಪಿ ನಾಯಕರನ್ನು ತೀವ್ರವಾಗಿ ಕಂಗೆಡಿಸಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆಗೂಡಿ ಬಹುಮತ ಸಾಧಿಸಿದರೂ, ಕೊನೆಯ ಕ್ಷಣದಲ್ಲಿ ಶಿವಸೇನೆ ಮೈತ್ರಿಯಿಂದ ನಿರ್ಗಮಿಸಿ ಬಿಜೆಪಿಗೆ ಅಧಿಕಾರ ಕೈತಪ್ಪುವಂತೆ ಮಾಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅತಿ ಕಡಿಮೆ ಸ್ಥಾನಗಳೊಂದಿಗೆ ಅಧಿಕಾರ ಕಳೆದುಕೊಂಡಿದೆ. ಛತ್ತೀಸ್ ಘಡ ಚುನಾವಣೆಯಲ್ಲಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಸರ್ಕಾರದ ವಿರೋಧಿ ಅಲೆ ಕಾಂಗ್ರೆಸ್ ಗೆ ವರದಾನವಾಗಿ ಪರಿಣಮಿಸಿದೆ.
ಒಂದೇ ವರ್ಷದಲ್ಲಿ ಐದು ಪ್ರಮುಖ ರಾಜ್ಯಗಳು ತನ್ನ ತೆಕ್ಕೆಯಿಂದ ಕೈಜಾರಿರುವುದು ಬಿಜೆಪಿಯನ್ನು ಕಂಗೆಡಿಸಿದೆ. ಸದ್ಯದಲ್ಲೇ ನಡೆಯಲಿರುವ ದೆಹಲಿ ವಿಧಾನಸಭೆ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳು ಬಿಜೆಪಿಗೆ ಸವಾಲಾಗಿ ಪರಿಣಮಿಸುವ ನಿರೀಕ್ಷೆಯಿದೆ. ಹೀಗಾಗಿ, ಚುನಾವಣಾ ಕಾರ್ಯಸೂಚಿ ಮತ್ತು ಕಾರ್ಯತಂತ್ರ ರೂಪಿಸುವಾಗ ಕೇವಲ ಪ್ರಧಾನಿ ಮೋದಿಯನ್ನಷ್ಟೇ ನೆಚ್ಚಿಕೊಳ್ಳದೆ ಹೆಚ್ಚು ಜಾಗೃತೆ ವಹಿಸುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.