newsics.com
ಲಕ್ನೋ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ. ಉಮಾ ಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಮಸೀದಿ ಧ್ವಂಸ ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್ .ಕೆ. ಯಾದವ್ ಸೆ.30ರಂದು ಈ ತೀರ್ಪು ನೀಡಿದ್ದಾರೆ. ಬಾಬರಿ ಮಸೀದಿ ಧ್ವಂಸ ಘಟನೆ ಪೂರ್ವ ನಿಯೋಜಿತ ಕೃತ್ಯ ಅಲ್ಲ, ಆಕಸ್ಮಿಕವಾಗಿ ನಡೆದಿರುವಂತದ್ದು, ಆರೋಪ ಸಾಬೀತು ಪಡಿಸಲು ಪ್ರಬಲ ಸಾಕ್ಷ್ಯಗಳು ಇಲ್ಲ. ಎಲ್ಲಾ 32 ಆರೋಪಿಗಳು ನಿರ್ದೋಷಿಗಳು ಎಂದು ಆದೇಶ ಪ್ರಕಟಿಸಿದ್ದಾರೆ. 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿನ ವಿವಾದಿತ ಭೂಮಿಯಲ್ಲಿದ್ದ ಬಾಬರಿ ಮಸೀದಿಯನ್ನು ಕರ ಸೇವಕರು ಧ್ವಂಸ ಮಾಡಿದ್ದರು.
ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟಲಾಗಿತ್ತು. ನಂತರ ಅಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹಿಂದುಗಳು ಆರೋಪಿಸಿದ್ದರು. 1984ರಲ್ಲಿ ವಿಶ್ವ ಹಿಂದು ಪರಿಷತ್ ಆಂದೋಲನ ಶುರು ಮಾಡಿತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು ಕರಸೇವಕರು ಬಾಬ್ರಿ ಮಸೀದಿಯನ್ನು ಕೆಡವಿದರು.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತಿತರ 48 ಮಂದಿ ಸೇರಿ ಸಂಚು ರೂಪಿಸಿ ಭೂವಿವಾದ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದ್ದಾರೆ ಎಂದು ದೂರು ದಾಖಲಿಸಲಾಯಿತು. 48 ಆರೋಪಿಗಳ ಪೈಕಿ 17 ಮಂದಿ ಸಾವನ್ನಪ್ಪಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಷಿ ಸಹಿತ ಎಲ್ಲ 32 ಆರೋಪಿಗಳ ಖುಲಾಸೆ
Follow Us