ಬೆಂಗಳೂರು: ನಗರದ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದ ದೊಂಬಿ ಹಾಗೂ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಮುಖಂಡ ಸಂಪತ್ ರಾಜ್‍ಗೆ ಸಿಸಿಬಿ ನೊಟೀಸ್ ಜಾರಿ ಮಾಡಿದೆ.
ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಡಿಜೆಹಳ್ಳಿಯಲ್ಲಿ ಗಲಾಟೆ ಆರಂಭಗೊಂಡಿದ್ದು, ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು. ಶಾಸಕರ ಅಕ್ಕನ ಮಗನ ವಿರುದ್ಧ ಧರ್ಮನಿಂದನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಹೊತ್ತಿ ಉರಿದಿದ್ದು, ಸಾರ್ವಜನಿಕರ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಬಳಿಕ ಈ ಪ್ರಕರಣದಲ್ಲಿ ಬಿಬಿಎಂಪಿ ಚುನಾವಣೆಯ ಹಿತಾಸಕ್ತಿ ಕೆಲಸ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದಲ್ಲೇ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜು ಆಪ್ತನ ಹೆಸರು ಕೇಳಿಬಂದಿತ್ತು. ಇದೀಗ ಪ್ರಕರಣದ ವಿಚಾರಣೆಗಾಗಿ ಮಾಜಿ ಮೇಯರ್ ಗೆ ನೊಟೀಸ್ ನೀಡಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಆದರೆ ಮಾಜಿ ಮೇಯರ್ ಸಂಪತ್ ರಾಜ್ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಪ್ರಸ್ತುತ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆಗೆ ಹಾಜರಾಗುವುದಿಲ್ಲ. ಸಿಸಿಬಿ ಮುಂದಿನ ದಿನಾಂಕ ಸೂಚಿಸಿದ ಬಳಿಕ ಹಾಜರಾಗಲಿದ್ದಾರೆ.
ಡಿಜೆಹಳ್ಳಿ ಪ್ರಕರಣ ಮಾಜಿ ಮೇಯರ್ ಸಂಪತ್ ರಾಜ್‍ಗೆ ಸಿಸಿಬಿ ನೊಟೀಸ್
Follow Us