ಬೀಜಿಂಗ್: ಕೊರೋನಾ ಹಿನ್ನೆಲೆಯಲ್ಲಿ ಅಮೆರಿಕದಿಂದ ಕೋಳಿ ಮಾಂಸ ಆಮದು ಮಾಡುವುದನ್ನು ಚೀನಾ ನಿಷೇಧಿಸಿದೆ. ಅಲ್ಲದೆ ಬೀಜಿಂಗ್’ನಲ್ಲಿರುವ ಪೆಪ್ಸಿ ಕಾರ್ಖಾನೆ ಘಟಕವನ್ನು ಮುಚ್ಚುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಯು.ಎಸ್.ನ ಪ್ರತಿಷ್ಠಿತ ಟೈಸನ್ ಫುಡ್ಸ್’ನಿಂದ ಫ್ರೋಜನ್ ಕೋಳಿ ಮಾಂಸದ ಆಮದನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಸೀಮಾ ಸುಂಕದ ಜನರಲ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಯು.ಎಸ್. ಕಂಪನಿಯ ಒಂದು ಉತ್ಪಾದನಾ ಕೇಂದ್ರದಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೀನಾ ಈ ನಿರ್ಧಾರ ಕೈಗೊಂಡಿದೆ.
ಇನ್ನು ಈಗಾಗಲೇ ಟೈಸನ್ ಫುಡ್ಸ್ ನಿಂದ ಬಂದಿರುವ ಎಲ್ಲ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ. ಬೀಜಿಂಗ್’ನ ಹಲವು ಉದ್ಯೋಗಿಗಳಲ್ಲಿ ಕೊರೋನಾ ಸೋಂಕು ಕಂಡುಬಂದ ಬಳಿಕ ಪೆಪ್ಸಿಕೋ ಸ್ನ್ಯಾಕ್ ಘಟಕವನ್ನು ಮುಚ್ಚಲು ಸೂಚಿಸಲಾಗಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ. ಈ ಮಧ್ಯೆ, ಬೀಜಿಂಗ್’ನಲ್ಲಿ 22 ಕೊರೋನಾ ಪ್ರಕರಣಗಳು ವರದಿಯಾಗಿವೆ.