newsics.com
ಬೆಂಗಳೂರು/ ನವದೆಹಲಿ: ರಾಜ್ಯದಲ್ಲಿ ಪ್ರತಿಕೂಲ ಹವಾಮಾನ ಮುಂದುವರಿದಿದೆ. ನಡುಗುವಷ್ಟು ಚಳಿಯ ಅನುಭವವಾಗುತ್ತಿದ್ದು, ಶೀತ ಸಂಬಂಧಿ ಕಾಯಿಲೆಗಳಿಂದ ನರಳುವವರ ಸಂಖ್ಯೆ ಹೆಚ್ಚುತ್ತಿದೆ.
ಬೆಳಗ್ಗೆ ಮೈನಡುಗುವ ಚಳಿಗೆ ಜನರು ಹೈರಾಣಾಗಿದ್ದರೆ, ಸಂಜೆ ಆಗುತ್ತಿದ್ದಂತೆ ಬೀಸುವ ಶೀತ ಗಾಳಿಗೆ ಜನರು ಮನೆಯಿಂದ ಹೊರಬರುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಮತ್ತು ಚಳಿ ಇದ್ದರೆ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯನ ಬಿಸಿಲು ಬೇಸಿಗೆಯ ಅನುಭವ ನೀಡುತ್ತಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಮತ್ತು ಮೈಸೂರು ಭಾಗಗಳಲ್ಲಿ ಚಳಿಯ ಪ್ರಮಾಣ 15 ರಿಂದ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30ರಿಂದ 32 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗುತ್ತಿದೆ. ಕೆಲ ಭಾಗಗಳಲ್ಲಿ ಬೆಳಗಿನ ಜಾವ ಮಂಜು ಸಹ ಬೀಳುತ್ತಿದೆ. ಇಬ್ಬನಿಸಹಿತ ಚಳಿ ಇರುವುದರಿಂದ ಜನ ಕಂಗಾಲಾಗಿದ್ದಾರೆ.
ಬೆಂಗಳೂರು 28-17, ಮೈಸೂರು 31-17, ಚಾಮರಾಜನಗರ 31-18, ರಾಮನಗರ 30-17, ಮಂಡ್ಯ 31-17, ಬೆಂಗಳೂರು, ಗ್ರಾಮಾಂತರ 28-17, ಚಿಕ್ಕಬಳ್ಳಾಪುರ 29-17, ಕೋಲಾರ 28-18, ಹಾಸನ 29-14, ಚಿಕ್ಕಮಗಳೂರು 29-13, ದಾವಣಗೆರೆ 31-15, ಶಿವಮೊಗ್ಗ 32-5, ಕೊಡಗು 28-14, ತುಮಕೂರು 30-17, ಉಡುಪಿ 30-21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು 29-21, ಉತ್ತರ ಕನ್ನಡ 30-14, ಧಾರವಾಡ 29-13, ಹಾವೇರಿ 31-14, ಹುಬ್ಬಳ್ಳಿ 30-14, ಬೆಳಗಾವಿ 28-13, ಗದಗ 30-14, ಕೊಪ್ಪಳ 29-16, ವಿಜಯಪುರ 29-16, ಬಾಗಲಕೋಟೆ 30-15, ಕಲಬುರಗಿ 30-16, ಬೀದರ್ 27-13, ಯಾದಗಿರಿ 31-17, ರಾಯಚೂರು 31-18, ಬಳ್ಳಾರಿ 31-18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಕಳೆದ 48 ಗಂಟೆಗಳಿಂದ ಮಳೆಯಾಗುತ್ತಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹವಾಮಾನ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿದೆ. ಮುಂದಿನ ಕೆಲವು ದಿನ ದೆಹಲಿ, ಪಂಜಾಬ್, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಶೀತ ಅಲೆ ಬೀಸಲಿದೆ. ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಭಾನುವಾರ ಹಿಮಪಾತವಾಗಿದ್ದು, 13ಕ್ಕೂ ಹೆಚ್ಚು ರೈಲುಗಳು ತಡವಾಗಿ ಸಂಚರಿಸುತ್ತಿವೆ.