* ಮೆಜೆಸ್ಟಿಕ್’ನಲ್ಲಿ ನೂಕುನುಗ್ಗಲು, ಮಾತಿನ ಚಕಮಕಿ, ಟೋಲ್’ನಲ್ಲಿ ಪ್ರತಿಭಟನೆ
ಬೆಂಗಳೂರು: ಮಂಗಳವಾರದಿಂದ ಒಂದು ವಾರ ಲಾಕ್ ಡೌನ್ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಜನ ಊರಿಗೆ ತೆರಳಲು ಮುಂದಾಗಿದ್ದಾರೆ.
ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಆತಂಕ ಮತ್ತು ಲಾಕ್ಡೌನ್’ನಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ಸಾವಿರಾರು ಜನ ಬೆಂಗಳೂರು ಬಿಡುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನ ಮೆಜಸ್ಟಿಕ್’ನಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗಿದೆ. ಬಸ್ಸುಗಳಲ್ಲಿ ಪ್ರಯಾಣಿಸಲು ಭಾರೀ ಪೈಪೋಟಿ ಕಂಡುಬಂದಿದೆ.
ಸಿಕ್ಕ ಸಿಕ್ಕ ವಾಹನಗಳಲ್ಲಿ ಊರು ಸೇರಿಕೊಳ್ಳುವ ಅವಸರದಲ್ಲಿ ಜನರಿದ್ದಾರೆ. ಇನ್ನು ಕೆಲವರು ಮನೆಗಳನ್ನು ಖಾಲಿ ಮಾಡಿಕೊಂಡು ಗಂಟು ಮೂಟೆ ಸಹಿತ ಊರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ತುಮಕೂರು, ಮೈಸೂರು, ಬಳ್ಳಾರಿ ರಸ್ತೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದ ಬಸ್ ಚಾಲಕರೊಂದಿಗೆ ಪ್ರಯಾಣಿಕರು ಗಲಾಟೆ ಮಾಡಿದ ಘಟನೆಗಳೂ ನಡೆದಿವೆ. ಪ್ರಯಾಣಿಕರು ತುಮಕೂರು ಟೋಲ್ ಬಳಿ ಬಸ್ ತಡೆದು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿವರೆಗೆ ಹೆಚ್ಚುವರಿಯಾಗಿ 1,600 ಬಸ್’ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಆದರೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬಸ್’ಗಳಿಗಾಗಿ ಜನ ಪರದಾಡುತ್ತಿದ್ದಾರೆ.
ವ್ಯಕ್ತಿಗತ ಅಂತರ ಖಚಿತಪಡಿಸಿಕೊಂಡ ನಂತರ ಮತ್ತು ಥರ್ಮಲ್ ಸ್ಕ್ರೀನಿಂಗ್ ನಡೆಸಿ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು. ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಈಗಾಗಲೇ ಯೋಜಿಸಲಾಗಿದೆ ಎಂದು ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.