ಬೆಂಗಳೂರು: ಮಾರಕ ಕೊರೋನಾ ಇದೇ ವೇಗದಲ್ಲಿ ಹರಡುತ್ತಿದ್ದರೆ ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡು ಲಕ್ಷದ ಹತ್ತು ಸಾವಿರ ತಲುಪುವ ಸಾಧ್ಯತೆಯಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಗಳ ತಂಡ ನಡೆಸಿದ ಅಧ್ಯಯನ ವರದಿ ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ದೇಶದಲ್ಲಿ ಇದೇ ಹೊತ್ತಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35 ಲಕ್ಷ ತಲುಪುವ ಸಾಧ್ಯತೆಯನ್ನು ವರದಿ ಸೂಚಿಸಿದೆ.
ಕೊರೋನಾದಿಂದ ಪ್ರಾಣ ನಷ್ಟವಾಗುತ್ತಿರುವ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ. ಸೆಪ್ಟೆಂಬರ್ ಅಂತ್ಯಕ್ಕೆ ದೇಶದಲ್ಲಿ ಒಂದು ಲಕ್ಷದ 40 ಸಾವಿರ ಮಂದಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ ರಾಜ್ಯದಲ್ಲಿ ಸುಮಾರು 8500 ಮಂದಿ ಕೊರೋನಾಕ್ಕೆ ಬಲಿಯಾಗಲಿದ್ದಾರೆ ಎಂಬ ಆತಂಕವನ್ನು ವರದಿ ವ್ಯಕ್ತಪಡಿಸಿದೆ.
ನವೆಂಬರ್ ತಿಂಗಳಲ್ಲಿ ದೇಶದಲ್ಲಿ ಕೊರೋನಾ ಪ್ರಕರಣ ಒಂದು ಕೋಟಿ 20 ಲಕ್ಷ ತಲುಪುವ ಸಾಧ್ಯತೆಯನ್ನು ಕೂಡ ವಿಜ್ಞಾನಿಗಳ ತಂಡ ಸೂಚಿಸಿದೆ. ಪ್ರೊಫೆಸರ್ ಗಳಾದ ಶಶಿಕುಮಾರ್ ಮತ್ತು ದೀಪಕ್ ಅವರ ನೇತೃತ್ವದಲ್ಲಿನ ತಂಡ ಈ ಅಧ್ಯಯನ ನಡೆಸಿದೆ.
ಮುಂದಿನ ಜನವರಿ ತಿಂಗಳ ಅಂತ್ಯದಲ್ಲಿ ದೇಶದಲ್ಲಿ 10 ಲಕ್ಷ ಮಂದಿ ಕೊರೋನಾಕ್ಕೆ ಬಲಿಯಾಗುವ ಸಂಭವವಿದೆ ಎಂದು ಅಧ್ಯಯನ ವರದಿ ಹೇಳಿದೆ. ರಾಜ್ಯದಲ್ಲಿ ಇದೇ ಅವಧಿಯಲ್ಲಿ ಅಂದರೆ ಜನವರಿ ತಿಂಗಳಲ್ಲಿ 10 ಲಕ್ಷದ 80 ಸಾವಿರ ಪ್ರಕರಣ ವರದಿಯಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ. ರಾಜ್ಯದಲ್ಲಿ ಸುಮಾರು 78,000 ಮಂದಿ ಪ್ರಾಣ ಕಳೆದುಕೊಳ್ಳುವ ಆತಂಕವನ್ನು ಅಧ್ಯಯನ ವರದಿ ವ್ಯಕ್ತಪಡಿಸಿದೆ.