ನವದೆಹಲಿ: ಮಧ್ಯಮ ಹಾಗೂ ಲಘು ಪ್ರಮಾಣದ ಕೊರೋನಾ ಸೋಂಕಿತರಿಗೆ ನೀಡಲಾಗುವ ಫ್ಯಾಬಿಫ್ಲು ಬ್ರಾಂಡ್ ನ ಫೈವಿಪಿರಾವಿಯರ್ ಔಷಧದ ಬೆಲೆ ಇಳಿಕೆಯಾಗಿದೆ. 103 ರೂ. ಇದ್ದ ಫೈವಿಪಿರಾವಿಯರ್ ಮಾತ್ರೆಯ ಬೆಲೆ ಈಗ 75 ರೂ.ಗೆ ಲಭ್ಯವಾಗಲಿದೆ.
ಔಷಧದ ಬೆಲೆಯನ್ನು ಶೇ.27ರಷ್ಟು ಕಡಿಮೆ ಮಾಡಿರುವುದಾಗಿ ಫೈವಿಪಿರಾವಿಯರ್ ಔಷಧ ತಯಾರಿಕ ಸಂಸ್ಥೆ ಗ್ಲೆನ್ ಮಾರ್ಕ್ ಫಾರ್ಮ ತಿಳಿಸಿದೆ. ಕಳೆದ ತಿಂಗಳು ಈ ಔಷಧ ಬಿಡುಗಡೆಯಾಗಿತ್ತು. ಹೆಚ್ಚು ಉತ್ಪಾದನೆ ಹಾಗೂ ಬೇಡಿಕೆಯ ಪರಿಣಾಮವಾಗಿ ಸಂಸ್ಥೆಗೆ ದೊರೆತ ಲಾಭವನ್ನು ಜನರಿಗೆ ತಲುಪಿಸಲು ಬೆಲೆ ಇಳಿಕೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.
ಫೈವಿಪಿರಾವಿಯರ್ ಗೆ ಅನುಮತಿ ನೀಡಲಾದ ದೇಶಗಳ ಮಾರುಕಟ್ಟೆಗಳಲ್ಲಿ ನಿಗದಿ ಮಾಡಿದ್ದಕ್ಕಿಂತಲೂ ಭಾರತದಲ್ಲಿ ಕಡಿಮೆ ಬೆಲೆಯನ್ನು ನಿಗದಿ ಮಾಡಲಾಗಿತ್ತು. ಈಗ ಬೆಲೆ ಮತ್ತಷ್ಟು ಕಡಿಮೆಯಾಗಿರುವುದರಿಂದ ರೋಗಿಗಳಿಗೆ ಸುಲಭವಾಗಿ ಈ ಔಷಧ ಸಿಗುವಂತಾಗುತ್ತದೆ ಎಂದು ಗ್ಲೆನ್ ಮಾರ್ಕ್ ಫಾರ್ಮಸ್ಯುಟಿಕಲ್ಸ್ ನ ಹಿರಿಯ ಉಪಾಧ್ಯಕ್ಷ ಹಾಗೂ ಭಾರತ ಉದ್ಯಮ ವಿಭಾಗದ ಮುಖ್ಯಸ್ಥ ಅಲೋಕ್ ಮಲೀಕ್ ಹೇಳಿದ್ದಾರೆ.