ಬೆಂಗಳೂರು: ಕೊರೋನಾ ಮತ್ತು ಲಾಕ್ಡೌನ್ ಭಯದಿಂದ ಬರೋಬ್ಬರಿ 7.5 ಲಕ್ಷ ಜನ ಬೆಂಗಳೂರು ತೊರೆದಿದ್ದಾರೆ ಎಂದು ಅಂದಾಜಿಸಲಾಗಿದೆ.
ಕಳೆದ 10 ದಿನಗಳ ಅವಧಿಯಲ್ಲಿ ಸುಮಾರು 7.5 ಲಕ್ಷ ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಈ ಪೈಕಿ 4.5 ಲಕ್ಷ ಜನ ಮನೆ ಖಾಲಿ ಮಾಡಿ ಊರು ತೊರೆದಿದ್ದಾರೆ ಎಂದು ಸರ್ಕಾರಕ್ಕೆ ಗೃಹ ಇಲಾಖೆ ಲೆಕ್ಕ ನೀಡಿದೆ. ಈ ಶುಕ್ರವಾರ, ಶನಿವಾರ ಮತ್ತು ಸೋಮವಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಗಳೂರಿನಿಂದ ವಲಸೆ ಹೋಗಿದ್ದಾರೆ. ಕಳೆದ ವಾರ ಒಂದೂವರೆ ಲಕ್ಷ ಜನ ಹೋಗಿದ್ದಾರೆ ಎಂದು ಅಂದಾಜು ಮಾಡಲಾಗಿತ್ತು. ಈ ಅಂದಾಜಿನ ಲೆಕ್ಕ ಈಗ ಮೂರು ಪಟ್ಟು ಹೆಚ್ಚಾಗಿದೆ.
ಹೀಗೆ ಏಕಾಏಕಿ ಬೆಂಗಳೂರು ತೊರೆಯಲು ಕೊರೋನಾ ಅಬ್ಬರ ಹಾಗೂ ಲಾಕ್ಡೌನ್ ಘೋಷಣೆ ಕಾರಣ ಎನ್ನಲಾಗಿದೆ. ಕೊರೋನಾಗೆ ಬೆಂಗಳೂರಲ್ಲಿ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಸುದ್ದಿಯೂ ಭಯದಿಂದ ತಮ್ಮೂರು ಸೇರಲು ಕಾರಣ ಎಂದು ಹೇಳಲಾಗಿದೆ. ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ಡೌನ್ ಆಗಲಿದೆ. ಹೀಗಾಗಿ ಕಳೆದ ದಿನದಿಂದ ಜನರು ಮನೆ ಸಾಮಾನು ಸಮೇತ ಬೆಂಗಳೂರು ಬಿಟ್ಟು ಹೋಗಿದ್ದಾರೆ. ಕೆಲವರು ಬೆಂಗಳೂರು ಸಹವಾಸವೇ ಬೇಡ ಎಂದು ತೆರಳಿದ್ದಾರೆ. ಇನ್ನೂ ಕೆಲವರು ಒಂದು ವಾರ ಲಾಕ್ಡೌನ್ ಇದೆ. ಮಾಡಲು ಕೆಲಸವಿಲ್ಲದೆ ಏನ್ ಮಾಡುವುದು ಎಂದು ತಮ್ಮ ಗ್ರಾಮಗಳಿಗೆ ಹೋಗಿದ್ದಾರೆ.