ಗುವಾಹಟಿ: ಅಸ್ಸಾಂನ ಕಾಮರೂಪ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಿರ್ಲಕ್ಷ್ಯ ಖಂಡಿಸಿ ನೂರಾರು ರೋಗಿಗಳು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರದಲ್ಲಿ ಸೂಕ್ತ ಆಹಾರ ನೀಡುತ್ತಿಲ್ಲ, ಕುಡಿಯಲು ನೀರು ಕೂಡ ಸಿಗುತ್ತಿಲ್ಲ ಎಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಪ್ರತಿಭಟನೆ ನಡೆಸಿದರು.
ಮಾಹಿತಿ ತಿಳಿದ ಕೂಡಲೇ ಚಂಗ್ಸಾರಿ ಕೋವಿಡ್ ಕೇರ್ ಕೇಂದ್ರಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಕೈಲಾಸ್ ಕಾರ್ತಿಕ್, ಕೊರೋನಾ ಸೋಂಕು ಪೀಡಿತರ ಜತೆ ಮಾತುಕತೆ ನಡೆಸಿದರು. ಕೋವಿಡ್ ಕೇರ್ ಕೇಂದ್ರದಲ್ಲಿ ಅಗತ್ಯ ಸೌಲಭ್ಯ ನೀಡುವ ಭರವಸೆ ನೀಡಿದರು.
ಕೊರೋನಾ ಆರೈಕೆ ಕೇಂದ್ರದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಒಂದೇ ಕೊಠ಼ಡಿಯಲ್ಲಿ ಹತ್ತು ಹನ್ನೆರಡು ಮಂದಿಯನ್ನು ಇರಿಸಲಾಗಿದೆ. ಇದರಿಂದ ಬಹಳ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಸಚಿವ ಹೇಮಂತ್ ಬಿಶ್ವಾಸ್, ಕೊರೋನಾ ಕೇರ್ ಸೆಂಟರ್’ನ ಸೌಲಭ್ಯ ತೃಪ್ತಿ ನೀಡದಿದ್ದರೆ ಈ ರೋಗಿಗಳು ತಮ್ಮ ಮನೆಗಳಿಗೆ ಮರಳ ಬಹುದು ಎಂದು ಹೇಳಿದ್ದಾರೆ. ಆದರೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ಮನೆಗೆ ತೆರಳಬೇಕು ಎಂದು ಅವರು ಸೂಚಿಸಿದ್ದಾರೆ. ಸರ್ಕಾರ ಎಲ್ಲ ನೆರವು ನೀಡುತ್ತಿದೆ. ಕೊರೋನಾ ಸೋಂಕಿತರ ಎಲ್ಲ ಖರ್ಚನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದು ಬಿಶ್ವಾಸ್ ಹೇಳಿದರು.