newsics.com
ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಾಜ್ಯದ ನ್ಯಾಯಾಲಯಗಳು ಸೆ.28 ರಿಂದ ಹಂತ ಹಂತವಾಗಿ ಆರಂಭಗೊಳ್ಳಲಿವೆ.
ಸೆ.28 ರಿಂದ ತಾಲೂಕು, ಅಕ್ಟೋಬರ್ 5 ರಿಂದ 13 ಜಿಲ್ಲೆ, ಅಕ್ಟೋಬರ್ 12 ರಿಂದ 17 ಜಿಲ್ಲಾ ನ್ಯಾಯಾಲಯಗಳು ಕಾರ್ಯಾರಂಭ ಮಾಡಲಿವೆ.
ಈ ಸಂಬಂಧ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿಯ ಪ್ರಕಾರ, ರಾಜ್ಯದ 55 ತಾಲೂಕು ಕೋರ್ಟ್’ಗಳು ಸೆ.28 ರಿಂದ ಕಾರ್ಯಾರಂಭ ಮಾಡಲಿವೆ. ಅಕ್ಟೋಬರ್ 5 ರಿಂದ 13 ಜಿಲ್ಲೆಗಳ ನ್ಯಾಯಾಲಯಗಳು ಆರಂಭಗೊಳ್ಳಲಿದ್ದು, ಉಳಿದ ಜಿಲ್ಲಾ ನ್ಯಾಯಾಲಯಗಳು ಅಕ್ಟೋಬರ್ 12 ರಿಂದ ಕಾರ್ಯಾರಂಭ ಮಾಡಲಿವೆ.
ದಾವಣಗೆರೆ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ರಾಮನಗರ, ಉಡುಪಿ, ಗದಗ, ಕೊಡಗು, ಕೊಪ್ಪಳ, ಯಾದಗಿರಿ, ಚಾಮರಾಜನಗರ ಜಿಲ್ಲಾ ನ್ಯಾಯಾಲಯಗಳು ಅಕ್ಟೋಬರ್ 5 ರಿಂದ ಆರಂಭಗೊಳ್ಳಲಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಜಿಲ್ಲಾ ನ್ಯಾಯಾಲಯಗಳು ಅಕ್ಟೋಬರ್ 12 ರಿಂದ ಕಾರ್ಯಾರಂಭ ಮಾಡಲಿವೆ.
ಶೇ.50ರಷ್ಟು ವಕೀಲರಿಗೆ ಮಾತ್ರ ಅವಕಾಶ
ಕೋರ್ಟ್ ಬೆಳಗ್ಗೆ 10:30 ರಿಂದ ಸಂಜೆ 4 ರವರೆಗೆ ತೆರೆದಿರಲಿದ್ದು, ಈ ಅವಧಿಯಲ್ಲಿ ಶೇ.50 ರಷ್ಟು ಮಂದಿಗೆ ಮಾತ್ರ ವಕೀಲರ ಸಂಘದ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಕೋರ್ಟ್ ಆವರಣದಲ್ಲಿನ ಕ್ಯಾಂಟೀನ್ ಸದ್ಯಕ್ಕೆ ತೆರೆಯುವಂತಿಲ್ಲ. ಅದೇ ರೀತಿ ಜೆರಾಕ್ಸ್ ಆಪರೇಟರ್ಸ್, ನೋಟರಿ ಪಬ್ಲಿಕ್, ಬೆರಳಚ್ಚುಗಾರರಿಗೆ ಅನುಮತಿ ನಿರಾಕರಿಸಲಾಗಿದೆ. ಕಕ್ಷಿದಾರರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಸಾಕ್ಷಿದಾರರು, ಜಾಮೀನು ಪಡೆದಿರುವ ಆರೋಪಿಗಳು ಕೋವಿಡ್ 19 ನೆಗೆಟಿವ್ ವರದಿ ಹಾಜರುಪಡಿಸಿ ನಿಗದಿತ ಪ್ರಕರಣಗಳ ವಿಚಾರಣೆ ದಿನದಂದು ಕೋರ್ಟ್ ಆವರಣದೊಳಗೆ ಪ್ರವೇಶ ಪಡೆಯಬಹುದಾಗಿದೆ.
ಪ್ರತಿದಿನ ಕೋರ್ಟ್’ಗಳು ಬೆಳಗಿನ ಅವಧಿಯಲ್ಲಿ ಐವರು ಸಾಕ್ಷಿದಾರರನ್ನು ಮಾತ್ರ ಭೌತಿಕವಾಗಿ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕೋರ್ಟ್ ಕಟೆಕಟೆಯನ್ನು ಮರುವಿನ್ಯಾಸಗೊಳಿಸಲು ಸೂಚಿಸಲಾಗಿದೆ.