ನವದೆಹಲಿ: ಭಾರತ- ಚೀನಾ ಗಡಿಯಲ್ಲಿನ ಪ್ರಸಕ್ತ ಪರಿಸ್ಥಿತಿ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಇಂದು ರಾಜ್ಯಸಭೆಗೆ ಸಮಗ್ರ ಮಾಹಿತಿ ನೀಡಿದರು. ಪ್ರಸಕ್ತ ಬಿಕ್ಕಟ್ಟಿಗೆ ಚೀನಾವೇ ಹೊಣೆ ಎಂದು ಅವರು ಟೀಕಿಸಿದರು. 1993 ಮತ್ತು 1996ರಲ್ಲಿ ಮಾಡಿಕೊಳ್ಳಲಾದ ದ್ವಿಪಕ್ಷೀಯ ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ.
ವಾಸ್ತವ ನಿಯಂತ್ರಣ ರೇಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ ಎಂದು ರಾಜನಾಥ್ ಸಿಂಗ್ ಟೀಕಿಸಿದರು. ದೇಶದ ಸಾರ್ವಭೌಮತ್ವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಭಾರತ ಎಂದಿಗೂ ಯಾರ ಮುಂದೆ ತಲೆಬಾಗುವುದಿಲ್ಲ ಎಂದು ರಾಜನಾಥ್ ಸಿಂಗ್ ಘೋಷಿಸಿದರು.
ಪ್ರಸಕ್ತ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಇಚ್ಚಿಸುತ್ತಿದೆ. ಆದರೆ ಇದು ದೇಶದ ದೌರ್ಬಲ್ಯವಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ದೇಶದ ಸಶಸ್ತ್ರಪಡೆಗಳು ಸಜ್ಜಾಗಿವೆ ಎಂದು ರಾಜನಾಥ್ ಸಿಂಗ್ ಘೋಷಿಸಿದರು