ನವದೆಹಲಿ: ಪರೀಕ್ಷೆಗಳನ್ನು ಮುಂದೂಡುವಂತೆ ಯುಜಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ.
ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಗೃಹಸಚಿವಾಲಯ ಕೈಗೊಂಡಿರುವ ನಿರ್ಣಯದ ಕುರಿತು ಸ್ಪಷ್ಟ ವಿವರಣೆಯನ್ನು ನ್ಯಾಯಾಲಯಕ್ಕೆ ನೀಡುವಂತೆ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್’ನ ಆರ್.ಸುಭಾಷ್ ರೆಡ್ಡಿ, ಎಂ.ಆರ್.ಶಾ ಅವರ ನೇತೃತ್ವದ ನ್ಯಾಯಪೀಠ, ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆ ರದ್ಧುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ್ದು, ಎಲ್ಲಾ ರಾಜ್ಯಗಳಿಗೆ ತಮ್ಮ ಅಫಡವಿಟ್ ನ್ನು ಅಗಸ್ಟ್ 7 ರ ಒಳಗೆ ಸಲ್ಲಿಸುವಂತೆ ಆದೇಶಿಸಿದ್ದು, ಮುಂದಿನ ವಿಚಾರಣೆ ಯನ್ನು ಅಗಸ್ಟ್ 10 ಕ್ಕೆ ನಿಗದಿಪಡಿಸಿದೆ.
ಇನ್ನು ಪರೀಕ್ಷೆ ಮುಂದೂಡಿಕೆ ಕೋರಿ ಸಲ್ಲಿಸಲಾಗಿರುವ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಹಾಗೂ ಯುಜಿಸಿ ಪರ ವಾದ ಮಂಡಿಸಿರುವ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಲಯ ಪರೀಕ್ಷೆಗೆ ತಡೆ ನೀಡಲಿದೆ ಎಂದು ವಿದ್ಯಾರ್ಥಿಗಳು ಭಾವಿಸುವ ಅಗತ್ಯವಿಲ್ಲ. ಓದನ್ನು ಮುಂದುವರಿಸಬಹುದು ಎಂದಿದ್ದಾರೆ.
ಇನ್ನು ಅರ್ಜಿದಾರರ ಪರ ವಾದ ಮಂಡಿಸಿದ ಅಲೋಕ್ ಶ್ರೀವಾಸ್ತವ್, ಅಸ್ಸಾಂ, ಬಿಹಾರ ಸೇರಿದಂತೆ ಹಲವು ರಾಜ್ಯದಲ್ಲಿ ಪ್ರಕೃತಿ ವಿಕೋಪದ ಸ್ಥಿತಿ ಇದೆ. ಹೀಗಾಗಿ ಪರೀಕ್ಷೆ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.
ವಾದ ಹಾಗೂ ಪ್ರತಿ ವಾದ ಆಲಿಸಿದ ನ್ಯಾಯಾಲಯ ಇದು ಮಧ್ಯಂತರ ಆದೇಶಕ್ಕೆ ಸೂಕ್ತವಾದ ಪ್ರಕರಣವಲ್ಲ ಎಂದಿದ್ದು, ವಿಚಾರಣೆ ಮುಂದೂಡಿದೆ.
ಪದವಿ ಅಂತಿಮ ಸೆಮಿಸ್ಟರ್ ಪರೀಕ್ಷೆ; ಆ.10ಕ್ಕೆ ಸುಪ್ರೀಂ ವಿಚಾರಣೆ
Follow Us