newsics.com
ಬೆಂಗಳೂರು: ಮೂರು ವಾರಗಳ ಹಿಂದಷ್ಟೇ ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದ ‘ಭುವನದ ಭಾಗ್ಯ’, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ, ಹಿರಿಯ ವಿಮರ್ಶಕ ಡಾ. ಗುರುರಾಜ ಶ್ಯಾಮಾಚಾರ ಆಮೂರ (ಡಾ.ಜಿ.ಎಸ್.ಆಮೂರ) (95) ಸೋಮವಾರ ನಿಧನರಾದರು.
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸ್ವಗೃಹದಲ್ಲಿ ಸೋಮವಾರ ಬೆಳಗ್ಗೆ 5 ಗಂಟೆ ಹೊತ್ತಿಗೆ ವಿಧಿವಶರಾದರೆಂದು ಆಮೂರ ಅವರ ಮಗ ರವಿ ಆಮೂರ ತಿಳಿಸಿದ್ದಾರೆ. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಹಾವೇರಿ ಜಿಲ್ಲೆಯ ಬೊಮ್ಮನಹಳ್ಳಿ ಮೂಲದ ಆಮೂರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಔರಂಗಾಬಾದ್ ನ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು ನಿವೃತ್ತಿ ನಂತರ ಕನ್ನಡ, ಇಂಗ್ಲಿಷ್ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಕೊಡುಗೆ ಪರಿಗಣಿಸಿ ಕೇಂದ್ರ ಸಾಹ ಅಕಾಡೆಮಿ, ಪಂಪ, ಮಾಸ್ತಿ, ನೃಪತುಂಗ, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಅಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ್ದ ಅಮೂರ ಅವರು, ಆಗಲೇ ‘ಕಾಮಿಡಿಯ ಪರಿಕಲ್ಪನೆ’ (‘ದ ಕಾನ್ಸೆಪ್ಟ್ ಆಫ್ ಕಾಮಿಡಿ’) ಎಂಬ ಮಹಾಪ್ರಬಂಧ ಬರೆದು ಡಾಕ್ಟರೇಟ್ ಪಡೆದಿದ್ದರು.
ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯ ಪ್ರಾಕಾರಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ಕನ್ನಡ ಸಾಹಿತ್ಯವನ್ನು ಆಂಗ್ಲಭಾಷಾ ಓದುಗರಿಗೆ ಪರಿಚಯಿಸಿದ್ದರು. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಅತಿ ಅಗ್ರಮಾನ್ಯರಲ್ಲೊಬ್ಬರು. ಆಂಗ್ಲ ಭಾಷೆ ಹೇಳಿಕೊಡುವ ಭಾಷೆಯಾದರೆ, ಇವರ ಬರವಣಿಗೆ, ಕೃತಿರಚನೆಗಳೆಲ್ಲವೂ ಕನ್ನಡ ಭಾಷೆಯಲ್ಲೇ ಆಗಿತ್ತು. ನಾಡಿನಾದ್ಯಂತ ಅಪಾರ ಶಿಷ್ಯರನ್ನು ಗಳಿಸಿರುವ ಅವರು, ವಿಮರ್ಶೆಯ ಜತೆಗೆ ಸತತ ಓದು, ಬರವಣಿಗೆ, ತಮ್ಮ ಅಧ್ಯಾಪನ ಕಾರ್ಯ ನಡೆಸಿದ್ದಲ್ಲದೆ ಮಾರ್ಗದರ್ಶನ ಮಾಡುತ್ತಿದ್ದರು.
ಕಳೆದ ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿಎ (ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾ, ಗದಗ ಹಾಗೂ ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ 16 ವರ್ಷ ಸೇವೆ ಸಲ್ಲಿಸಿದ್ದರು. 14 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಮಾರ್ಗದರ್ಶನ ಹಾಗೂ 3 ವಿದ್ಯಾರ್ಥಿಗಳಿಗೆ ಎಂಫಿಲ್ ಮಾರ್ಗದರ್ಶನ ಮಾಡಿದ್ದರು. 1985ರಲ್ಲಿ, ಔರಂಗಬಾದ್ ವಿವಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಮತ್ತು ವಿಭಾಗ ಪ್ರಮುಖರೆಂದು ನೇಮಕಗೊಂಡರು. 1988ರಲ್ಲಿ ನಿವೃತ್ತರಾಗುವವರೆಗೂ ಔರಂಗಾಬಾದ್ನಲ್ಲಿದ್ದರು.
ಮುಖ್ಯಮಂತ್ರಿ ಸಂತಾಪ:
ಖ್ಯಾತ ಸಾಹಿತಿ, ವಿಮರ್ಶಕ ಡಾ: ಜಿ.ಎಸ್.ಅಮೂರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಸಾಪ ಅಧ್ಯಕ್ಷ ಮನು ಬಳಿಗಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ’. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಅಭಿಮಾನಿಗಳು ಮತ್ತು ಶಿಷ್ಯವೃಂದಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.