Thursday, August 18, 2022

ಹೊಸ ಇತಿಹಾಸ ಬರೆದ ದ್ರೌಪದಿ ಮುರ್ಮು

Follow Us

ಜೀವನದುದ್ದಕ್ಕೂ ಕಷ್ಟ, ಸಂಕಟ, ಸಂಕಷ್ಟ, ಹೋರಾಟಗಳ ಮೂಲಕವೇ ಮೇಲೆದ್ದು ಸಾಧನೆಯ ಶಿಖರ ಮುಟ್ಟಿದ ದಿಟ್ಟ ಮಹಿಳೆ ದ್ರೌಪದಿ‌ ಮುರ್ಮು. ಸ್ತ್ರೀ ಸಬಲೀಕರಣ ಎಂಬುದರ ನಿಜವಾದ ಅರ್ಥ ಇರುವುದು ಸ್ವೇಚ್ಛಾಚಾರದ ಮಹಿಳಾ ಸಮಾನತೆಯ ಹಾಗೂ ದುರಹಂಕಾರದ ದಾರ್ಷ್ಟ್ಯಗಳಲ್ಲಿ ಅಲ್ಲ, ಬದಲಾಗಿ ಅಬಲೆ ಮಹಿಳೆಯೊಬ್ಬಳು ತನ್ನಲ್ಲಿನ ಅಂತಃಸತ್ವವನ್ನು ಕಂಡುಕೊಳ್ಳುವುದರಲ್ಲಿ ಎಂಬುದನ್ನು ಜಗತ್ತಿಗೆಲ್ಲ ಮನಗಾಣಿಸಿದ ದ್ರೌಪದಿ ಮುರ್ಮು, ಭಾರತೀಯ ಮಹಿಳೆಯರ ಗಟ್ಟಿತನಕ್ಕೆ ನಿಜವಾದ ಮಾದರಿ.

newsics.com SPECIAL DESK

ಡಿಶಾದ ಸಂತಾಲ್‌ ಬುಡಕಟ್ಟಿನ ನಿರ್ಲಕ್ಷಿತ ಸಮುದಾಯಕ್ಕೆ ಸೇರಿದ 64 ವರ್ಷ ವಯಸ್ಸಿನ ದ್ರೌಪದಿ ಮುರ್ಮು ದೇಶದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದ್ದಾರೆ.
ಅತಿ ಕೆಳಹಂತದ ಬುಡಕಟ್ಟು ಜನಾಂಗದ‌ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಹುದ್ದೆಯೆನಿಸಿರುವ ರಾಷ್ಟ್ರಪತಿ‌ ಪದವಿಗೇರಿರುವುದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ.

ಈವರೆಗೂ ದೇಶದ ಬಹುತೇಕರಿಗೆ ಅಜ್ಞಾತವಾಗಿಯೇ ಉಳಿದು, ತಮ್ಮ ಕಷ್ಟ ಪರಂಪರೆಗಳ ಹೊರತಾಗಿಯೂ ಸಾಮಾಜಿಕ ಹೋರಾಟಗಳ ಮೂಲಕ ಮಹಿಳಾ ಮುತ್ಸದ್ದಿಯೆನಿಸಿ ಈಗ ರಾಷ್ಟ್ರಪತಿ‌ ಪದವಿ ಅಲಂಕರಿಸಿದ್ದಾರೆ.
ತಮ್ಮ ನಮ್ರ ಹಾಗೂ ವಿನಯಶೀಲ ಸ್ವಭಾವ, ಅದರೊಳಗೆ ಸುಪ್ತವಾಗಿ ಅಡಗಿರುವ ಹೋರಾಟದ ಸ್ಥೈರ್ಯ, ಸಮಾಜದ ದಮನಿತ ಬುಡಕಟ್ಟು ಸಮುದಾಯದ ಹಿನ್ನೆಲೆ, ಮಹಿಳಾ ರಾಷ್ಟ್ರಪತಿ ಎಂಬ ಉಪಾಧಿಗೆ ಒಳಗಾಗಿದ್ದಾರೆ. ಪ್ರಥಮ ಬುಡಕಟ್ಟು ಸಮುದಾಯದ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಈ‌ ಮೂಲಕ ನಿರ್ಲಕ್ಷಿತ ಈಶಾನ್ಯ ರಾಜ್ಯಗಳಿಗೆ ಸಿಗಬಹುದಾದ ಪ್ರಾತಿನಿಧ್ಯ ಹಾಗೂ ಇವೆಲ್ಲಕ್ಕಿಂತ ಮಿಗಿಲಾಗಿ ತಮ್ಮ ಯೋಗ್ಯತೆ, ಅರ್ಹತೆ ಹಾಗೂ ಪ್ರಾಮಾಣಿಕ ಮೌಲ್ಯಗಳ ಕಾರಣದಿಂದ, ದ್ರೌಪದಿ ಮುರ್ಮುರವರು ಜನಸಾಮಾನ್ಯರ ರಾಷ್ಟ್ರಪತಿಯಾಗಿ ಹೊರಹೊಮ್ಮಿದ್ದಾರೆ.
ರಾಷ್ಟ್ರಪತಿ‌ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಕೆಯ ದಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ದ್ರೌಪದಿ ಅವರು ಕಸ ಗುಡಿಸಿ ಸೇವೆ ಸಲ್ಲಿಸಿದ್ದರು.
ನತದೃಷ್ಟ ತಾಯಿ…
ದ್ರೌಪದಿ ಮುರ್ಮು ಮೂಲತಃ ಶಿಕ್ಷಕಿ, ಗೃಹಿಣಿ. ತನ್ನ ಮಧ್ಯವಯಸ್ಸಿನಲ್ಲಿ ಬಾಳಸಂಗಾತಿಯನ್ನು ಕಳೆದುಕೊಂಡ ದ್ರೌಪದಿ, ಬದುಕಿಗೆ ಆಧಾರವಾಗಬೇಕಿದ್ದ ಬೆಳೆದ ಇಬ್ಬರು ಗಂಡು ಮಕ್ಕಳನ್ನು ಅಪ್ರಾಪ್ತ ವಯಸ್ಸಿನಲ್ಲಿಯೇ ಕಳೆದುಕೊಂಡ ನತದೃಷ್ಟ ತಾಯಿ.
ಜೀವನದುದ್ದಕ್ಕೂ ಕಷ್ಟ, ಸಂಕಟ ಹೋರಾಟಗಳ ಮೂಲಕವೇ ಮೇಲೆದ್ದು ಸಾಧನೆಯ ಶಿಖರ ಮುಟ್ಟಿದ ದಿಟ್ಟ ಮಹಿಳೆ, ಸ್ತ್ರೀ ಸಬಲೀಕರಣ ಎಂಬುದರ ನಿಜವಾದ ಅರ್ಥ ಇರುವುದು ಸ್ವೇಚ್ಛಾಚಾರದ ಮಹಿಳಾ ಸಮಾನತೆಯ ಆರ‍್ಶ ಹಾಗೂ ದುರಹಂಕಾರದ ದಾರ್ಷ್ಟ್ಯಗಳಲ್ಲಿ ಅಲ್ಲ, ಬದಲಾಗಿ ಅಬಲೆ ಮಹಿಳೆಯೊಬ್ಬಳು ತನ್ನಲ್ಲಿನ ಅಂತಃಸತ್ವವನ್ನು ಕಂಡುಕೊಳ್ಳುವುದರಲ್ಲಿ ಎಂಬುದನ್ನು ಜಗತ್ತಿಗೆಲ್ಲ ಮನಗಾಣಿಸಿದ ದ್ರೌಪದಿ ಮುರ್ಮು, ಭಾರತೀಯ ಮಹಿಳೆಯರ ಗಟ್ಟಿತನಕ್ಕೆ ನಿಜವಾದ ಮಾದರಿ ಎನಿಸಿದವರು.

ರಾಜಕೀಯ ಪಯಣ…
ದ್ರೌಪದಿ ಮುರ್ಮು ಅವರ ರಾಜಕೀಯ ಪಯಣ 1997ರಲ್ಲಿ ಶುರುವಾಯ್ತು. ಓಡಿಶಾದಲ್ಲಿ ನಡೆದ ರಾಯರಂಗಪುರ ಪಂಚಾಯಿತಿ ಕೌನ್ಸಿಲರ್‌ ಚುನಾವಣೆಗೆ ಬಿಜೆಪಿ ಪರವಾಗಿ ಸ್ಪರ್ಧಿಸಿ ಆಯ್ಕೆಯಾಗುವುದರ ಮೂಲಕ ರಾಜಕೀಯ ಜೀವನ ಆರಂಭವಾಯಿತು.
ತನಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ವರಿಷ್ಠರ ಮೆಚ್ಚುಗೆ ಗಳಿಸಿಕೊಂಡ ದ್ರೌಪದಿಯವರು, 2000 ರಲ್ಲಿ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯರಂಗಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದದ್ದಲ್ಲದೆ, ಬಿಜೆಪಿ ರಚಿಸಿದ ರಾಜ್ಯ ಸಚಿವ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ ಪಶುಸಂಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಉಸ್ತುವಾರಿಯನ್ನು 2004ರವರೆಗೆ ಕಾರ್ಯನಿರ್ವಹಿಸಿದರು.
2004ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೊಮ್ಮೆ ರಾಯರಂಗಪುರ ಕ್ಷೇತ್ರದಿಂದಲೇ ಬಿಜೆಪಿ ವತಿಯಿಂದ ಶಾಸಕರಾಗಿ ಆಯ್ಕೆಯಾದ ದ್ರೌಪದಿ ಮುರ್ಮು, ಮಯೂರಭಂಜ್‌ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮತ್ತು ರಾಜ್ಯ ಬಿಜೆಪಿಯ ಪರಿಶಿಷ್ಟ ಬುಡಕಟ್ಟು ಮೋರ್ಚಾದ ಅಧ್ಯಕ್ಷರಾಗಿಯೂ 2006 ರವರೆಗೆ ಕಾರ್ಯಭಾರ ನಿರ್ವಹಿಸಿದರು.
ಇವರ ಪ್ರಾಮಾಣಿಕತೆ ಹಾಗೂ ನಾಯಕತ್ವ ಗುಣಕ್ಕೆ ಪ್ರತಿಯಾಗಿ 2015 ಮೇನಲ್ಲಿ ಜಾರ್ಖಂಡ್‌ ರಾಜ್ಯದ ಒಂಭತ್ತನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುವ ಯೋಗ ಬಂದೊದಗಿತು. ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸಿದ ಮುರ್ಮುರವರು 2021ರವರೆಗೂ ತಮಗೆ ದೊರೆತ ಗುರುತರ ಜವಾಬ್ದಾರಿಯನ್ನು ಘನತೆಯಿಂದ ನಿಭಾಯಿಸಿದರು.

ದೌರ್ಜನ್ಯ ಸಹಿಸದ ದ್ರೌಪದಿ…
ದ್ರೌಪದಿಯವರದ್ದು ಮೃದು ಹಿಂಜರಿಕೆಯ ಸ್ವಭಾವವೇನಲ್ಲ. ಎಲ್ಲಿಯಾದರೂ ಬುಡಕಟ್ಟು ಮಹಿಳೆಯರ ಮೇಲೆ ಅಥವಾ ಬಡಜನರ ಮೇಲೆ ದೌರ್ಜನ್ಯ ನಡೆದದ್ದು ತಿಳಿಯಿತೆಂದರೆ ಮುಗಿಯಿತು, ಡಿಜಿಪಿಯಂತಹ ಉನ್ನತ ಅಧಿಕಾರಿಗಳಿಗೂ ಬೆವರು ಬರುವಂತೆ ತರಾಟೆಗೆ ತೆಗೆದುಕೊಳ್ಳುವುದೂ, ಸದನದಲ್ಲಿ ಮೂಲನಿವಾಸಿಗಳ ಹಕ್ಕುಗಳ ಕುರಿತು ಗಟ್ಟಿದನಿಯಲ್ಲಿ ಪ್ರಶ್ನೆಯೆತ್ತುವುದೂ ಅವರಿಗೆ ಗೊತ್ತು. ಸಮುದಾಯ ಹಿತದ ಅವರ ಈ ಬದ್ಧತೆಯನ್ನು ಪ್ರಶ್ನೆ ಮಾಡುವಂತೆಯೇ ಇಲ್ಲವೆಂದು ಅವರ ಪಕ್ಷದ ಕಾರ್ಯಕರ್ತರು, ವರಿಷ್ಠರು ಅಭಿಪ್ರಾಯಪಡುತ್ತಾರೆ.
ನೀಲಕಂಠ ಪ್ರಶಸ್ತಿ…
ಈ ಬದ್ಧತೆಯ ಕಾರಣದಿಂದಲೇ ಅವರಿಗೆ 2008ರಲ್ಲಿ ಒಡಿಶಾ ವಿಧಾನಸಭೆಯ ಅತ್ಯುತ್ತಮ ಶಾಸಕರಿಗೆ ನೀಡಲಾಗುವ ‘ನೀಲಕಂಠ’ ಪ್ರಶಸ್ತಿ ದೊರೆತಿದೆ.
ದ್ರೌಪದಿ ಮುರ್ಮುರವರು 20ನೇ ಜೂನ್‌ 1958 ರಂದು ಒಡಿಶಾ ರಾಜ್ಯದ ಮಯೂರ್‌ಭಂಜ್‌ ಪ್ರಾಂತ್ಯದ ಉಪಾಬೇಡಾದಲ್ಲಿ ಜನಿಸಿದರು. ಇವರ ತಂದೆ ಬಿರಾಂಚಿ ನಾರಾಯಣ ತುಡು ಒಬ್ಬ ಸಾಧಾರಣ ರೈತನಾಗಿದ್ದರೂ, ತನ್ನ ಹಳ್ಳಿಯಲ್ಲಿದ್ದ ಬುಡಕಟ್ಟು ಜನಗಳ ಮುಖಂಡರಾಗಿದ್ದವರು. ಮುರ್ಮುರವರ ಪ್ರಾಥಮಿಕ ವಿದ್ಯಾಭ್ಯಾಸವು ಉಪಾರ್‌ಬೇಡಾದ ಕೆ.ಬಿ. ಹೈಸ್ಕೂಲ್‌ನಲ್ಲಿ ನಡೆಯಿತು‌‌. ತಮ್ಮ ಎಂ.ಎ. ಪದವಿಯನ್ನು ಭುವನೇಶ್ವರದ ರಮಾದೇವಿ ವುಮೆನ್ಸ್‌ ಕಾಲೇಜಿನಲ್ಲಿ ಪೂರ್ಣಗೊಳಿಸಿದ ದ್ರೌಪದಿಯವರು, ಉನ್ನತ ವಿದ್ಯಾಭ್ಯಾಸವನ್ನು ಹೊಂದಿ ಸಮಾಜದ ವಿವಿಧ ಆಯಾಮಗಳ ಪರಿಚಯ ಮಾಡಿಕೊಂಡರು. ತನ್ನ ಸುತ್ತಲಿನ ದಮನಿತ ಸಮುದಾಯದ ನೋವುಗಳಿಗೆ ದನಿಯಾಗಿ, ದೊಡ್ಡಮಟ್ಟದಲ್ಲಿ ಅವರಿಗೆ ನೆರವಾಗಿ ಒದಗಿ ಬರಬೇಕೆಂಬುದು ಅವರೊಳಗಿನ ತುಡಿತವಾಗಿದ್ದಿತು. ತನ್ನ ಇಬ್ಬರು ಸಹೋದರರ ನಡುವೆ ಬೆಳೆದ ಒಬ್ಬಳೇ ಮಗಳು ದ್ರೌಪದಿಯವರನ್ನು ಆಕೆಯ ವಿದ್ಯಾಭ್ಯಾಸದ ನಂತರ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದ, ಬೈದಪೋಸಿಯ ಶ್ಯಾಮ್‌ಚರಣ್‌ ಮುರ್ಮು ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಪ್ರಸ್ತುತ ಇವರು ವಾಸವಿರುವುದು ಅದೇ ಗ್ರಾಮದಲ್ಲಿಯೇ.

ಬೋಧನಾ ವೃತ್ತಿ…
ಆರಂಭದ ದಿನಗಳಲ್ಲಿ ದ್ರೌಪದಿಯವರಿಗೆ ಬೋಧನಾವೃತ್ತಿಯ ಮೇಲೆ ಆಸಕ್ತಿಯಿದ್ದಿತು. ರಾಜಕೀಯ ಪ್ರವೇಶಿಸುವ ಮುನ್ನ ಅವರು ಶ್ರೀ ಅರಬಿಂದೋ ಇಂಟಿಗ್ರಲ್‌ ಎಜುಕೇಷನ್‌ ಅಂಡ್‌ ರಿಸರ್ಚ್‌ ಸೆಂಟರ್‌ನಲ್ಲಿ ಉಪ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. 1979 ರಿಂದ 1983 ರವರೆಗೆ ಒಡಿಶಾದ ನೀರಾವರಿ ಇಲಾಖೆಯಲ್ಲಿ ಜೂನಿಯರ್‌ ಸಹಾಯಕರಾಗಿ ಸೇವೆ ಸಲ್ಲಿಸಿದರು. ಆದರೆ 1983 ರಿಂದ ಮುಂದೆ ಅನಿವಾರ್ಯ ಕಾರಣಗಳಿಂದಾಗಿ ತನ್ನ ಮಕ್ಕಳನ್ನು ಸಲಹುವ ಉದ್ದೇಶದಿಂದ ಸರ್ಕಟ ಕೆಲಸಕ್ಕೆ ರಾಜೀನಾಮೆಯಿತ್ತು ಗೃಹಕೆಲಸದ ಜೊತೆಗೆ, ಮೆಲ್ಲನೆ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳಲ್ಲಿ ದ್ರೌಪದಿಯವರು ತಮ್ಮನ್ನು ತಾವು ತೊಡಗಿಸಿಕೊಂಡರು.
ಈ ನಡುವೆ ತನ್ನ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ ನೆರವೇರಿಸಬಹುದಾದ ಸರ್ಕಾರಿ ಯೋಜನೆಗಳ ಅನುಷ್ಠಾನಗಳ ಕಡೆಗೆ ಗಮನಹರಿಸಿದ ಮುರ್ಮು, ಬಹುದಿನಗಳಿಂದ ಜಾರಿಯಾಗದೆ ನೆನೆಗುದಿಗೆ ಬಿದ್ದಿದ್ದ ಬೈದಪೋಸಿ- ರಾಯರಂಗಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ನಿರ್ಮಾಣ ಕಾರ್ಯವನ್ನು ಹೋರಾಟದ ಮಾದರಿಯಲ್ಲಿ ಕೈಗೆತ್ತಿಕೊಂಡು ಹಿಡಿದ ಹಠ ಬಿಡದೇ 2003ರಲ್ಲಿ ನಿರ್ಮಾಣಗೊಂಡ ಸೇತುವೆಯನ್ನು ಲೋಕಾರ್ಪಣ ಮಾಡಿ ತನ್ನ ಹಳ್ಳಿಯನ್ನು ಹೊರ ಜಗತ್ತಿನ ಸಂಪರ್ಕಕ್ಕೆ ತಂದರು. ಇವರ ರಾಜಕೀಯ ಜೀವನದ ರಂಗಪ್ರವೇಶವು ಮೊದಲಾದದ್ದು ಇಲ್ಲಿಂದಲೇ ಎಂದು ಹೇಳಬಹುದು.

ಪ್ರಾಮಾಣಿಕ ಮನಸ್ಥಿತಿ…
ಆದರೆ ಎಲ್ಲಾ ಸಾಮಾಜಿಕ ಕಾರ್ಯಕರ್ತರ ಹಾಗೆ, ಮರಿ ಪುಢಾರಿಗಳ ಹಾಗೆ ಯೋಜನೆಗಳ ಹೆಸರಿನಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಜಾಯಮಾನಕ್ಕೆ ಒಗ್ಗದ ದ್ರೌಪದಿಯವರು ರಾಷ್ಟ್ರಪತಿಯಾಗುವ ಮುನ್ನ ಅತ್ಯಂತ ಸರ್ವೇಸಾಧಾರಣವಾದ ಮನೆಯಲ್ಲಿ ವಾಸವಿದ್ದರು. ತಾವೊಬ್ಬ ಮಾಜಿ ಮಂತ್ರಿಯಾಗಿದ್ದರೂ, ಸಾಲ ತೀರಿಸಲಿಕ್ಕಾಗಿ ಬಿಬಿಎಸ್‌ಆರ್‌‌ನಲ್ಲಿದ್ದ ತನ್ನ ಭೂಮಿಯನ್ನು ಮಾರಾಟ ಮಾಡಲಿಕ್ಕೆ ಅನುಮತಿ ಕೋರಿ ನಾಲ್ಕು ಬಾರಿ ಅರ್ಜಿ ಸಲ್ಲಿಸಿ, ಸರ್ವೇಸಾಧಾರಣ ಹಳ್ಳಿಯ ಹೆಣ್ಣುಮಗಳಂತೆ ಸಬ್‌ ಕಲೆಕ್ಟರರ ಕಚೇರಿಗೆ ಅಲೆದಾಡುತ್ತಾ, ವರ್ಷಗಟ್ಟಲೇ ಕಾಯ್ದು ಯಾವ ಪ್ರಭಾವವನ್ನೂ ಬಳಸದೆ, ಕಾನೂನು ಮಾರ್ಗವಾಗಿ ಸಾಲ ಪಡೆಯಲೆಂದು ಬಂದಿದ್ದ ಈಕೆಯ ವಿನಮ್ರತೆ ಹಾಗೂ ಘನತೆಯ ಕುರಿತು, ನಿವೃತ್ತ ಸಬ್‌ ಕಲೆಕ್ಟರ್‌ ಆಗಿರುವ ಶಿಶಿರಕಾಂತ ಪಾಂಡಾ ಅವರು ಸಾಮಾಜಿಕ ಜಾಲತಾಣವೊಂದರಲ್ಲಿ ಲೇಖನವೊಂದನ್ನು ಬರೆದು ಆಕೆಗೆ ಶುಭ ಕೋರಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಸಾಲು ಸಾಲು ಸಾವು…
ಈ ಸಾಮಾಜಿಕ ಕಾರ್ಯಕ್ರಮಗಳ, ಗೃಹಕೃತ್ಯಗಳ ಜಂಜಾಟದ ನಡುವೆ, 2009 ರಲ್ಲಿ ದ್ರೌಪದಿಯವರ ಮೊದಲನೇ ಮಗ ಲಕ್ಷ್ಮಣ ಮುರ್ಮು ಅಪಘಾತವೊಂದರಲ್ಲಿ ಅಸುನೀಗುತ್ತಾನೆ. ಕೆಲಕಾಲದವರೆಗೆ ಈ ಆಘಾತದಿಂದ ಹೊರಬರಲಾಗದೆ ಒದ್ದಾಡಿದ ಮುರ್ಮು ಇತರೆ ಕೆಲಸಗಳಲ್ಲಿ ಅದನ್ನು ಮರೆಯಲು ಯತ್ನಿಸುತ್ತಾರೆ. ಇದರ ಬೆನ್ನಲ್ಲಿಯೇ ಆಕೆ ಭೂಮಿಯ ಮೇಲೆ ಸಾಲಕ್ಕೆ ಸಲ್ಲಿಸಿದ ಅರ್ಜಿ ಇತ್ಯರ್ಥವಾಗುವುದರ ಒಳಗಾಗಿಯೇ 2013ರಲ್ಲಿ ತನ್ನ ಇನ್ನೊಬ್ಬ ಮಗನನ್ನೂ ಆಕೆ ಕಳೆದುಕೊಳ್ಳುತ್ತಾರೆ. ಈ ಆಘಾತವನ್ನು ತಾಳಿಕೊಳ್ಳುವ ಮುನ್ನವೇ 2014 ರಲ್ಲಿ ತನ್ನ ಪತಿಯನ್ನೂ ದ್ರೌಪದಿ ಕಳೆದುಕೊಳ್ಳುತ್ತಾರೆ. ಇಷ್ಟಾದರೂ ಜಗ್ಗದ ಆಕೆ ತನಗೆ ಸಂಭವಿಸಿದ ವೈಯಕ್ತಿಕ ದುರಂತದ ಬಗ್ಗೆ ಹೇಳುವುದಿಷ್ಟು;
‘ಜೀವನದಲ್ಲಿ ನಾನು ಸಾಕಷ್ಟು ಏಳುಬೀಳುಗಳನ್ನು ಕಾಣಬೇಕಾಯಿತು. ನನ್ನ ಎರಡೂ ಗಂಡುಮಕ್ಕಳನ್ನಲ್ಲದೇ ಗಂಡನನ್ನೂ ಕಳೆದುಕೊಂಡು, ಸಂಪೂರ್ಣ ನೆಲಕಚ್ಚಿ ಹೋಗುವದರಲ್ಲಿದ್ದೆ. ಆದರೆ ಜನರಿಗೆ ಸೇವೆ ಸಲ್ಲಿಸಲೆಂದೇ ಬದುಕಿ ಉಳಿಯಬೇಕೆಂದು ನನಗೆ ದೇವರು ಸ್ಥೈರ್ಯ ನೀಡಿದ್ದಾನೆ”.
ಮರಣ ಹೊಂದಿದ ತಮ್ಮ ಪತಿ, ಮಕ್ಕಳ ನೆನಪಿನಲ್ಲಿ ಟ್ರಸ್ಟ್‌ ಒಂದನ್ನು ಸ್ಥಾಪಿಸಿ, ತನ್ನ ಗಂಡನ ಮನೆಯ ಆಸ್ತಿಯನ್ನು ಟ್ರಸ್ಟ್‌ ವತಿಯಿಂದ ಶಾಲೆಯೊಂದಕ್ಕೆ ದ್ರೌಪದಿ ಮುರ್ಮುರವರು ದಾನ ಮಾಡಿದ್ದಾರೆ. ಉಳಿದಿರುವ ಆಕೆಯ ಒಬ್ಬಳೇ ಮಗಳು ಇತಿಶ್ರೀ ಮುರ್ಮು ಈಗ ಬ್ಯಾಂಕ್‌ ಉದ್ಯೋಗಿ.

ರಾಷ್ಟ್ರಪತಿ ಹುದ್ದೆಗೇರಿದ ಬುಡಕಟ್ಟು ಜನಾಂಗದ ದ್ರೌಪದಿ‌ ಮುರ್ಮು

ಮತ್ತಷ್ಟು ಸುದ್ದಿಗಳು

vertical

Latest News

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...

ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗ: ನಿಷೇಧಾಜ್ಞೆ ಮುಂದುವರಿಕೆ

newsics.com ಶಿವಮೊಗ್ಗ:  ಫ್ಲೆಕ್ಸ್ ವಿವಾದದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ಶಿವಮೊಗ್ಗದಲ್ಲಿ ಇದೀಗ ಪರಿಸ್ಥಿತಿ ಶಾಂತವಾಗಿದೆ. ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ನಗರದ ಸೂಕ್ಷ್ಮ...
- Advertisement -
error: Content is protected !!