ನವದೆಹಲಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಇದೇ ಮೊದಲ ಬಾರಿ ಬುಧವಾರದಿಂದ (ಮೇ 13) ಏಕ ನ್ಯಾಯಾಧೀಶ ಪೀಠವು ಅಸ್ತಿತ್ವಕ್ಕೆ ಬರಲಿದೆ.
ಏಕ ನ್ಯಾಯಾಧೀಶ ಪೀಠವು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲೇ ಇದೇ ಮೊದಲು. ಸಾಮಾನ್ಯವಾಗಿ ಸರ್ವೋಚ್ಚ ನ್ಯಾಯಾಲಯದ ಪೀಠವು ಕನಿಷ್ಠ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.
ಬಾಕಿಯಿರುವ ಪ್ರಕರಣಗಳ ವಿಲೇವಾರಿಗಾಗಿ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದ್ದು, ಪೀಠವು ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿದೆ.
7 ವರ್ಷಗಳ ಜೈಲುಶಿಕ್ಷೆ ಮೀರದ ದಂಡನೆಗೆ ಅರ್ಹ ಅಪರಾಧ ಪ್ರಕರಣಗಳಲ್ಲಿ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಏಕಸದಸ್ಯ ನ್ಯಾಯಪೀಠವು ನಡೆಸಲಿದೆ. ಇಂತಹ ಪ್ರಕರಣಗಳ ವಿಚಾರಣೆಯನ್ನು ಈ ಮೊದಲು ದ್ವಿಸದಸ್ಯ ನ್ಯಾಯಪೀಠಗಳು ನಡೆಸುತ್ತಿದ್ದವು.
ಸರ್ವೋಚ್ಚ ನ್ಯಾಯಾಲಯವು ಜಾಮೀನು ಕಳೆದ ಸೆಪ್ಟೆಂಬರ್ನಲ್ಲಿ, ನಿರೀಕ್ಷಣಾ ಜಾಮೀನು ಮತ್ತು ವರ್ಗಾವಣೆ ಅರ್ಜಿಗಳ ವಿಚಾರಣೆಗೆ ಏಕ ನ್ಯಾಯಾಧೀಶರಿಗೆ ಅವಕಾಶ ಕಲ್ಪಿಸಲು ತನ್ನ ನಿಯಮಗಳಿಗೆ ತಿದ್ದುಪಡಿ ತಂದಿತ್ತು.