ಬೆಂಗಳೂರು: ಮುಂದಿನ ಗಗನಯಾನ ಮಿಷನ್ ಗೆ ನಾಲ್ವರು ಗಗನಯಾತ್ರಿಗಳನ್ನು ಗುರುತಿಸಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗಗನಯಾನ ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ಭಾಗವಾಗಿ 2022ರ ಬಳಿಕ 7 ದಿನಗಳ ಕಾಲ ಗಗನಯಾತ್ರಿಗಳನ್ನು ಕಳುಹಿಸಲು ಭಾರತೀಯ ಸಿಬ್ಬಂದಿ ಕಕ್ಷೀಯ ಬಾಹ್ಯಾಕಾಶ ನೌಕೆಯಾಗಿದೆ ಎಂದು ಹೇಳಿದರು.
ಆಯ್ಕೆಯಾದ ಗಗನಯಾತ್ರಿಗಳಿಗೆ ಐಎಎಂ ಮತ್ತು ರಷ್ಯಾದಲ್ಲಿ ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದರು.
ನಾಲ್ವರಿಗೆ ಜನವರಿ ಮೂರನೇ ವಾರದಿಂದ ರಷ್ಯಾದಲ್ಲಿ ತರಬೇತಿ ಆರಂಭಗೊಳ್ಳಲಿದ್ದು, ಆಯ್ಕೆಯಾಗಿರುವ ನಾಲ್ವರೂ ಗಗನಯಾತ್ರಿಗಳು ಪುರುಷರೇ ಆಗಿದ್ದು, ಸದ್ಯಕ್ಕೆ ಮಹಿಳಾ ಯಾತ್ರಿ ಅಂತಿಮಗೊಂಡಿಲ್ಲ ಎಂದು ಸಿವನ್ ತಿಳಿಸಿದರು.
ಇದೇ ವೇಳೆ ಚಂದ್ರಯಾನ-3ರ ಬಗ್ಗೆ ಮಾತನಾಡಿದ ಅವರು, ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಚಂದ್ರಯಾನ ಯೋಜನೆ ಪ್ರಗತಿಯಲ್ಲಿದೆ. ಮುಂದಿನ ವರ್ಷ ಉಡಾವಣೆಯಾಗಬಹುದೆಂದು ತಿಳಿಸಿದರು. ಸದ್ಯ ಉಡಾವಣೆ ಮಾಡಿರುವ ಚಂದ್ರಯಾನ-2 ಯಶಸ್ವಿಯಾಗಿದೆ. ಆದರೆ, ವಿಕ್ರಮ್ ಲ್ಯಾಂಡರ್ ನ ಸಾಫ್ಟ್ ಲ್ಯಾಂಡ್ ಸಫಲವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎರಡನೇ ಬಾಹ್ಯಾಕಾಶ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ತಮಿಳುನಾಡಿನ ತೂತುಕುಡಿಯಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು