ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮಂಗಳವಾರ ಮನವಿ ಮಾಡಿದ್ದಾರೆ.
ಈ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ಗಳನ್ನು ಅಥವಾ ಮುಖದ ಕವರ್ಗಳ ಬಳಕೆಯನ್ನು ಹೆಚ್ಚಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದಾರೆ.
ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ನಂತರವೇ ಮನೆಯಿಂದ ಹೊರಹೋಗುವಂತೆ ಮೋದಿ ಕರೆನೀಡಿದ್ದಾರೆ.
ಮೋದಿ ಅವರು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳೊಂದಿಗೆ ಮಂಗಳವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್’ನಲ್ಲಿ ಈ ಮಾತುಗಳನ್ನಾಡಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಪಿಎಂ ಮೋದಿಯವರ ಆರನೇ ಸಂವಾದ ಇದಾಗಿದೆ. ಪಂಜಾಬ್, ಕೇರಳ, ಗೋವಾ, ಉತ್ತರಾಖಂಡ್, ಜಾರ್ಖಂಡ್ ಮುಖ್ಯಮಂತ್ರಿಗಳು ಮತ್ತು ಈಶಾನ್ಯ ರಾಜ್ಯಗಳ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಕೊರೋನಾ ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ದೇಶದ ಉತ್ಪಾದನಾ ಚಟುವಟಿಕೆ ಕೂಡ ಚೇತರಿಸಿಕೊಂಡಿದ್ದು, ಆರ್ಥಿಕ ಸುಧಾರಣೆಗಳು ರೈತರ ಜೀವನವನ್ನು ಸುಧಾರಣೆ ಮಾಡಲಿವೆ ಎಂದರು. ಭಾರತದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ ಎಂದು ಮೋದಿ ಹೇಳಿದರು.