ನವದೆಹಲಿ: ಕೇಂದ್ರ ಸರ್ಕಾರ ಕರ್ನಾಟಕದ ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಿದೆ.
ಶುಕ್ರವಾರ ಈ ವಿಷಯ ತಿಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಣ್ಣ ಆಹಾರ ಉದ್ಯಮಗಳ ಉತ್ತೇಜನಕ್ಕಾಗಿ 10000 ಕೋಟಿ ರೂ. ವಿಶೇಷ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಸ್ಥಳೀಯ ವಸ್ತುಗಳನ್ನು ಜಾಗತಿಕ ಬ್ರ್ಯಾಂಡ್ ಮಾಡುವ ಪ್ರಧಾನಿ ಮೋದಿಯವರ ಆಶಯವನ್ನು ಈ ಮೂಲಕ ನೆರವೇರಿಸಲಾಗುವುದು ಎಂದರು.
ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಾಲ, ಕೃಷಿ ಸಂಬಂಧಿತ ಸ್ಟಾರ್ಟ್ ಅಪ್ಗಳಿಗೂ ಸಾಲ ಸೌಲಭ್ಯ ಒದಗಿಸಲಾಗುವುದು. ಸ್ಥಳೀಯ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಶಸ್ತ್ಯ ಸೇರಿ ಆಹಾರ ಘಟಕಗಳಿಗೆ ಉತ್ತೇಜನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು
ಕೊರೋನಾ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ನಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಉತ್ತೇಜನ ತುಂಬಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಸಚಿವೆ ನಿರ್ಮಲ ಸೀತಾರಾಮನ್ ಪ್ಯಾಕೇಜ್ ವಿವರ ನೀಡಿದರು.
ಲಾಕ್ಡೌನ್ ನಿಂದ ಹಾಲಿನ ಬೇಡಿಕೆ ಕುಸಿದಿದ್ದು, ಉತ್ತೇಜನಕ್ಕಾಗಿ 2020-21ರವರೆಗೆ ಡೈರಿ ಸಹಕಾರಿ ಸಂಸ್ಥೆಗಳಿಗೆ ವಾರ್ಷಿಕ ಶೇ. 2 ರಷ್ಟು ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ನೀಡುವ ಹೊಸ ಯೋಜನೆ ಜಾರಿಗೆ ತರಲಾಗುವುದು. ಇದರಿಂದ 2 ಕೋಟಿ ರೈತರಿಗೆ ಅನುಕೂಲವಾಗಲಿದೆ. ಪಶುಸಂಗೋಪನೆ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.