ತಿರುವನಂತಪುರಂ: ಕೇರಳ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ 15 ಕೋಟಿ ರೂಪಾಯಿ ಚಿನ್ನ ಕಳ್ಳಸಾಗಾಟದ ಆರೋಪಿ ಸ್ವಪ್ನಾ ಸುರೇಶ್ ಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ. ಕಸ್ಟಂಸ್ ಅಧಿಕಾರಿಗಳು ಸ್ವಪ್ನಾ ವಾಸಿಸುತ್ತಿದ್ದ ತಿರುವಂನತಪುರಂನಲ್ಲಿರುವ ಅಪಾರ್ಟಮೆಂಟ್ ಗೆ ದಾಳಿ ನಡೆಸಿದ್ದಾರೆ. ಸಿಸಿಟಿವಿ ವಶಪಡಿಸಿಕೊಳ್ಳಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ತಿರುವನಂತಪುರಂನಲ್ಲಿ ಟ್ರಿಪಲ್ ಲಾಕ್ ಡೌನ್ ಜಾರಿಯಲ್ಲಿದೆ. ಇದರಿಂದಾಗಿ ಸ್ವಪ್ನಾ ಅವರು ತಿರುವನಂತಪುರಂನಲ್ಲಿಯೇ ಅಡಗಿ ಕುಳಿತಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ವಪ್ನಾ ಅವರು ನಿರೀಕ್ಷಣಾ ಜಾಮೀನು ಪಡೆಯಲು ಯತ್ನ ಕೂಡ ನಡೆಸುತ್ತಿದ್ದಾರೆ. ಪತಿಯಿಂದ ವಿಚ್ಚೇಧನ ಪಡೆದಿದ್ದ ಸ್ವಪ್ನಾ ಅಪಾರ್ಟ್ ಮೆಂಟ್ ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಈ ಮಧ್ಯೆ ಸ್ವಪ್ನಾ ಸುರೇಶ್ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಿನ್ಸಿಪಾಲ್ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಎರಡೂ ಹುದ್ದೆಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ.
ಈ ಮಧ್ಯೆ ತನ್ನ ರಾಜತಾಂತ್ರಿಕರೊಬ್ಬರ ಹೆಸರು ಈ 30 ಕಿಲೋ ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಸಂಯುಕ್ತ ಅರಬ್ ಎಮಿರೇಟ್ಸ್ ಆದೇಶ ನೀಡಿದೆ. ಕೇಂದ್ರ ಸರ್ಕಾರಕ್ಕೆ ಯುಎಇ ಈ ಸಂಬಂಧ ತನ್ನ ನಿಲುವು ತಿಳಿಸಿದೆ. ಇದೀಗ ಹೆಸರು ಕೇಳಿ ಬಂದಿರುವ ರಾಜತಾಂತ್ರಿಕ ಅಧಿಕಾರಿಗೆ ವಿಯೆನ್ನಾ ಒಪ್ಪಂದದ ಪ್ರಕಾರ ರಕ್ಷಣೆಯಿದ್ದು, ಅವರನ್ನು ವಿಚಾರಣೆಗೆ ಗುರಿಪಡಿಸುವಂತಿಲ್ಲ.